ಹೃದಯ ಶಸ್ತ್ರಚಿಕಿತ್ಸೆ ನಡೆಸುವ ಬಡ ರೋಗಿಗಳಿಗಾಗಿ ಬೆಂಗಳೂರಿನ ಪ್ರಮುಖ ಖಾಸಗಿ ಆಸ್ಪತ್ರೆ ನಾರಾಯಣ ಹೃದಯಾಲಯ ಮತ್ತು ಎಸ್‌ಬಿಐ, ಪೈಲಟ್ ಆಧಾರದಲ್ಲಿ ನೂತನ ಸಾಲ ಯೋಜನೆಯೊಂದನ್ನು ಪ್ರಾರಂಭಿಸಿದೆ.
ಎಸ್‌ಬಿಐ ಹೃದಯ ಸುರಕ್ಷಾ ಯೋಜನೆಯಡಿಯಲ್ಲಿ, ಶೇ.8.5ರಷ್ಟು ಬಡ್ಡಿದರದೊಂದಿಗೆ ರೋಗಿಯು ವೆಚ್ಚದ ಶೇ.80ರಷ್ಟು ಸಾಲ ಪಡೆಯಬಹುದಾಗಿದೆ.
ಗರಿಷ್ಠ ಆರು ತಿಂಗಳ ಅವಧಿಯೊಳಗೆ ಬಡ್ಡಿ ಸಹಿತ ಪೂರ್ಣ ಮೊತ್ತವನ್ನು ಸಾಲಗಾರರು ಬ್ಯಾಂಕಿಗೆ ಹಿಂತಿರುಗಿಸಬೇಕಾಗುತ್ತದೆ. ಮರುಪಾವತಿ ಅವಧಿಯ ಮೂರು ತಿಂಗಳ ಬಡ್ಡಿ ಪಾವತಿಯನ್ನು ಆಸ್ಪತ್ರೆಯೇ ನೀಡುತ್ತದೆ ಎಂದು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿ ಶೆಟ್ಟಿ ತಿಳಿಸಿದ್ದಾರೆ.
ಬಾಂಗ್ಲಾದೇಶ ಗ್ರಾಮೀಣ ಬ್ಯಾಂಕ್ ಸ್ಥಾಪಕ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಪ್ರೊ.ಮಹಮ್ಮದ್ ಯೂನುಸ್ ಈ ಯೋಜನೆಯನ್ನು ಅನಾವರಣಗೊಳಿಸಿದರು.
ತುರ್ತು ಚಿಕಿತ್ಸೆಯ ಅಗತ್ಯವಿರುವ ಬಡ ರೋಗಿಗಳಿಗಾಗಿ ಸಾಲ ನೀಡುವ ನಿಟ್ಟಿನಲ್ಲಿ ಪೈಲಟ್ ಯೋಜನೆಯು ಕಡಿಮೆ ಬಡ್ಡಿದರದಲ್ಲಿ ಸಾಲ ವ್ಯವಸ್ಥೆಯನ್ನು ಮಾಡುತ್ತದೆ ಎಂದು ಶೆಟ್ಟಿ ಹೇಳಿದ್ದಾರೆ.
ಕೆಳ ಮತ್ತು ಮಧ್ಯಮ ವರ್ಗಕ್ಕೆ ಸೇರಿದ ಕುಟುಂಬಗಳಿಗೆ ವೈದ್ಯಕೀಯ ವೆಚ್ಚಗಳಿಗಾಗಿ ಹಣದ ಕೊರತೆ ಇರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ನಾರಾಯಣ ಹೃದಯಾಲಯದಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗೊಳ್ಳುವ ಬಡ ರೋಗಿಗಳಿಗೆ ಈ ಸಾಲ ಯೋಜನೆ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
|