ಸ್ವಸಹಾಯ ಗುಂಪುಗಳಿಗೆ ಮತ್ತು ರೈತರಿಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆ ನೀಡಲು ಉದ್ಯುಕ್ತವಾಗಿರುವ, ದೇಶದ ಮೂರನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್, ದೇಶದ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ನೆಟ್ವರ್ಕ್ ವೃದ್ಧಿಸುವ ಚಿಂತನೆ ನಡೆಸಿದೆ.
ಮಹಾನಗರಗಳಲ್ಲಿ ಎಚ್‌ಡಿಎಫ್‌ಸಿ ನೀಡುವ ಕೋರ್ ಬ್ಯಾಂಕಿಂಗ್ ಸೌಲಭ್ಯವು ಗ್ರಾಮೀಣ ಪ್ರದೇಶದಲ್ಲಿ ನೂತನ ಶಾಖೆ ಪ್ರಾರಂಭಕ್ಕೆ ಸಮವಾಗಿದೆ ಎಂದು ಬ್ಯಾಂಕಿನ ಹಿರಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಮುಂದಿನ ಹಣಕಾಸು ವರ್ಷದೊಳಗೆ, ದೇಶದಾದ್ಯಂತ 200 ಶಾಖೆಗಳನ್ನು ಪ್ರಾರಂಭಿಸಲು ಯೋಜನೆ ನಡೆಸಲಾಗಿದೆ. ಇದರಲ್ಲಿ 100ಕ್ಕೂ ಹೆಚ್ಚು ಶಾಖೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭಿಸಲಾಗುವುದು ಎಂದು ಎಚ್‌ಡಿಎಫ್‌ಸಿ ಬ್ಯಾಂಕಿನ ಉಪಾಧ್ಯಕ್ಷ ಜಿ.ಎಸ್.ಗೋಪಿನಾಥ್ ತಿಳಿಸಿದ್ದಾರೆ.
ಪ್ರಸಕ್ತವಿರುವ ಒಟ್ಟು 325 ಶಾಖೆಗಳಲ್ಲಿ 125 ಶಾಖೆಗಳು ಗ್ರಾಮೀಣ ಮತ್ತು ಅರೆ ನಗರಗಳಲ್ಲಿದ್ದು, 113 ನಗರ ಪ್ರದೇಶ ಮತ್ತು 87 ಶಾಖೆಗಳು ಮಹಾನಗರಗಳಲ್ಲಿವೆ. ರೈತರು ಮತ್ತು ಸ್ವಸಹಾಯ ಗುಂಪುಗಳು ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗಳನ್ನು ಹೊಂದುವುದು ಬ್ಯಾಂಕಿನ ಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ, ಹೆಚ್ಚು ಕ್ಷೇತ್ರ ನೌಕರರನ್ನು ನಿಯೋಜಿಸಲು ಮತ್ತು ಗ್ರಾಮೀಣ ಪ್ರದೇಶದ ಶಾಖೆಗಳಿಗೆ ಇಂಟರ್ನೆಟ್ ಮತ್ತು ಇತರ ಸೌಲಭ್ಯಗಳನ್ನು ನೀಡಲು ಎಚ್‌ಡಿಎಫ್‌ಸಿ ಯೋಜನೆ ನಡೆಸಿದೆ ಎಂದು ಅವರು ಹೇಳಿದ್ದಾರೆ.
|