ಸರಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್, ತನ್ನ 3.5 ಕೋಟಿ ಸ್ಥಿರ ದೂರವಾಣಿ ಗ್ರಾಹಕರಿಗಾಗಿ ಕರೆ ವಿವರ ದಾಖಲೆ(ಸಿಡಿಆರ್) ಬಿಲ್ಲಿಂಗ್ ವಿಧಾನವನ್ನು ಮುಂದಿನ ಮೂರು ತಿಂಗಳುಗಳಲ್ಲಿ ಪ್ರಾರಂಭಿಸಲು ಯೋಜನೆ ಹೊಂದಿರುವುದಾಗಿ ಹೇಳಿದೆ.
ಪ್ರಸಕ್ತ, ಬಿಎಸ್ಎನ್ಎಲ್‌ನ ಬಿಲ್ಲಿಂಗ್ ವಿಧಾನವು ಅಸಾಂಪ್ರದಾಯಿಕ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದಾಗಿ ಗ್ರಾಹಕರಿಗೆ ಸಂಪೂರ್ಣ ವಿವರಗಳನ್ನು ನೀಡಲು ಬಿಎಸ್ಎನ್ಎಲ್ ಅಶಕ್ತವಾಗಿದೆ. ಈ ನಿಟ್ಟಿನಲ್ಲಿ, ಸದ್ಯದಲ್ಲಿಯೇ ಬಿಎಸ್ಎನ್ಎಲ್ ನೂತನ ಬಿಲ್ಲಿಂಗ್ ವಿಧಾನವನ್ನು ಪ್ರಾರಂಭಿಸಲಿದೆ ಎಂದು ಬಿಎಸ್ಎನ್ಎಲ್ ಉಪ ಪ್ರಧಾನ ನಿರ್ದೇಶಕ ಸುನಿಲ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೇಶದಾದ್ಯಂತ 20 ಪ್ರಮುಖ ದೂರವಾಣಿ ಕೇಂದ್ರಗಳನ್ನು ಬಿಎಸ್ಎನ್ಎಲ್ ಹೊಂದಿದ್ದು, ಈ ಎಲ್ಲಾ ಕೇಂದ್ರಗಳಲ್ಲಿ ಮುಂದಿನ ಎರಡರಿಂದ ಮೂರು ತಿಂಗಳುಗಳಲ್ಲಿ ಸಿಡಿಆರ್ ಬಿಲ್ಲಿಂಗ್ ವಿಧಾನವನ್ನು ಪ್ರಾರಂಭಿಸಲಾಗುವುದು ಎಂದು ಸುನಿಲ್ ಹೇಳಿದ್ದಾರೆ. ಸಂಪೂರ್ಣ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದ್ದು, ಮುಂದಿನ ಆರರಿಂದ ಎಂಟು ತಿಂಗಳುಗಳಲ್ಲಿ ಎಲ್ಲಾ ಕೇಂದ್ರಗಳಲ್ಲೂ ಈ ತಂತ್ರಜ್ಞಾನವನ್ನು ಅಳವಡಿಸಲಾಗುವುದು ಎಂದು ಅವರು ಸೂಚಿಸಿದ್ದಾರೆ.
ಈ ನೂತನ ಬಿಲ್ಲಿಂಗ್ ವಿಧಾನದಲ್ಲಿ, ಸಂಪೂರ್ಣ ಕಾರ್ಪೋರೇಟ್ ಹೌಸ್‌ಗೆ ಒಂದು ಬಿಲ್ ಸಾಕಾಗುತ್ತದೆ ಮತ್ತು ದೇಶದ ಯಾವುದೇ ಭಾಗದಲ್ಲೂ ಬಿಲ್ ಪಾವತಿ ಮಾಡಲು ಸಾಧ್ಯವಾಗಲಿದೆ ಎಂದು ಬಿಎಸ್ಎನ್ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
|