ಭಾರತದಲ್ಲಿನ ಉದ್ಯಮ ಅಭಿವೃದ್ಧಿಗಾಗಿ ರಾಜಕಾರಣಿಗಳು ಮತ್ತು ಉದ್ಯಮಿಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳುವ ಮೂಲಕ ಪ್ರಮುಖ ಉದ್ಯಮಿ ಮುಖೇಶ್ ಅಂಬಾನಿ ಸಿಂಗೂರಿನ ಟಾಟಾ ನ್ಯಾನೋ ಯೋಜನೆಗೆ ಬೆಂಬಲ ನೀಡಿದ್ದಾರೆ.
ನಗರ ಮತ್ತು ಹಳ್ಳಿ ಪ್ರದೇಶಗಳಲ್ಲಿರುವ ಲಕ್ಷಾಂತರ ಮಂದಿಯ ಆಕಾಂಕ್ಷೆಯನ್ನು ಪೂರೈಸಲು ಒಟ್ಟಾಗಿ ಕಾರ್ಯನಿರ್ವಹಿಸುವಂತೆ ರಾಜಕೀಯ ನಾಯಕರಿಗೆ ಮತ್ತು ಭಾರತೀಯ ಉದ್ಯಮಗಳಿಗೆ ಮುಖೇಶ್ ಕರೆ ನೀಡಿದ್ದಾರೆ.
ನ್ಯಾನೋ ಯೋಜನೆಯು ದೇಶದ ಆರ್ಥಿಕ ಅಭಿವೃದ್ಧಿಗೆ ಅತ್ಯಂತ ಲಾಭದಾಯಕವಾಗಿದ್ದು, ಇದು ಜಾಗತಿಕವಾಗಿ ಭಾರತದ ಮೇಲಿನ ಅಭಿಪ್ರಾಯವನ್ನು ಉತ್ತಮಗೊಳಿಸುವುದರೊಂದಿಗೆ ಹೆಚ್ಚಿನ ವಿದೇಶೀ ಬಂಡವಾಳವನ್ನೂ ಆಕರ್ಷಿಸುತ್ತದೆ ಎಂದು ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.
ನ್ಯಾನೋ ಯೋಜನೆಯು ವಿಶಿಷ್ಟ ಮತ್ತು ಹೊಸ ಉದ್ಯಮಶೀಲತೆಯಾಗಿದ್ದು, ಇದು ಭಾರತವನ್ನು ಸಣ್ಣ ಕಾರು ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿಸುತ್ತದೆ ಎಂದು ಅಂಬಾನಿ ಹೇಳಿದ್ದಾರೆ.
ದೇಶದ ಸ್ಪರ್ಧಾತ್ಮಕತೆಯನ್ನು ಮತ್ತು ಉದ್ಯೋಗ ಪ್ರಮಾಣವನ್ನು ಹೆಚ್ಚಿಸಲು ಇಂತಹ ಬ್ರಹತ್ ಬಂಡವಾಳಕ್ಕೆ ಭಾರತೀಯ ಉದ್ಯಮವು ಪ್ರೋತ್ಸಾಹ ನೀಡಬೇಕು ಎಂದು ಅಂಬಾನಿ ತಿಳಿಸಿದ್ದಾರೆ.
ಉತ್ತರಖಂಡ್‌ಗೆ ನ್ಯಾನೋ? ಏತನ್ಮಧ್ಯೆ, ಸಿಂಗೂರಿನಿಂದ ನ್ಯಾನೋ ಘಟಕವು ಹೊರಹೋಗಬೇಕೆಂಬ ಒತ್ತಾಯ ಕೇಳಿಬರುತ್ತಿರುವುದರೊಂದಿಗೆ, ನಿಗದಿತ ಸಮಯದಲ್ಲಿ ನ್ಯಾನೋ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿಟ್ಟಿನಲ್ಲಿ ನ್ಯಾನೋ ಕಾರು ನಿರ್ಮಾಣ ಯೋಜನೆಯನ್ನು ಉತ್ತರಖಂಡ್‌ನ ಪಾಂಟ್ನಾಗರ್ ಸ್ಥಾವರದಲ್ಲಿ ಪ್ರಾರಂಭಿಸಲು ಟಾಟಾ ಮೋಟಾರ್ಸ್ ಚಿಂತನೆ ನಡೆಸುತ್ತಿದೆ.
ಸಿಂಗೂರಿನಲ್ಲಿನ ಪ್ರತಿಭಟನೆಯ ನಡುವೆಯೂ ನ್ಯಾನೋ ಕಾರನ್ನು ಅಕ್ಟೋಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಇದರಿಂದ ಟಾಟಾಗೆ ಸಹಾಯವಾಗಲಿದೆ.
ಲಾಭದಾಯಕ ತೆರಿಗೆ ವಿನಾಯತಿಯನ್ನು ನೀಡುವ ಪ್ರಸ್ತಾಪವನ್ನು ಉತ್ತರಖಂಡ್ ಹೊಂದಿದ್ದು, ಈ ನಿಟ್ಟಿನಲ್ಲಿ ಉತ್ತರಖಂಡ್ ಸ್ಥಾವರದಲ್ಲಿ ಪ್ರತಿದಿನ 100 ಯೂನಿಟ್ ಉತ್ಪಾದನೆಯನ್ನು ಮಾಡಲು ಟಾಟಾ ಚಿಂತಿಸುತ್ತಿದೆ ಎಂದು ಟಾಟಾ ಮೂಲಗಳು ತಿಳಿಸಿವೆ.
ಒಟ್ಟಾರೆ, ಒಂದು ತಿಂಗಳಲ್ಲಿ ಉತ್ತರಖಂಡ್ ಸ್ಥಾವರದಲ್ಲಿ 3000 ಯೂನಿಟ್ ಉತ್ಪಾದನೆ ಮಾಡುವ ಗುರಿಯನ್ನು ಟಾಟಾ ಹೊಂದಿದ್ದು, ಇದು ಟಾಟಾದ ಒಟ್ಟು ಉತ್ಪಾದನಾ ಗುರಿಯ ಪ್ರಮಾಣಕ್ಕಿಂತ ಕಡಿಮೆಯಾಗಿದ್ದರೂ, ಸಿಂಗೂರಿನ ಪ್ರತಿಭಟನೆ ಮುಂದುವರಿದರೂ ಅಕ್ಟೋಬರ್ ತಿಂಗಳಲ್ಲಿ ನ್ಯಾನೋ ಬಿಡುಗಡೆಗೆ ಇದು ಸಹಾಯಕವಾಗಲಿದೆ ಎಂದು ಮೂಲಗಳು ಹೇಳಿವೆ.
|