ಟಾಟಾ ಮೋಟಾರ್ಸ್ ಸ್ವಾಧೀನಪಡಿಸಿಕೊಂಡಿರುವ ಜಮೀನನ್ನು ರೈತರಿಗೆ ಹಿಂತಿರುಗಿಸಬೇಕೆಂದು ಆಗ್ರಹಿಸಿ, ಟಾಟಾ ಮೋಟಾರ್ಸ್ ಘಟಕದಲ್ಲಿ ತೃಣಮೂಲ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯು ತೀವ್ರಗೊಳ್ಳುತ್ತಿರುವುದರೊಂದಿಗೆ, ಸಿಂಗೂರಿನ ಪರಿಸ್ಥಿತಿ ಕುರಿತಾಗಿ ಭಾರತೀಯ ಉದ್ಯಮ ಒಕ್ಕೂಟವು ಖಂಡನಾ ಸಂದೇಶವನ್ನು ಹೊರಡಿಸಿದೆ.
ಕಾವೇರಿದ ಪ್ರತಿಭಟನೆಯು ನ್ಯಾನೋ ಘಟಕದ ನೌಕರರಲ್ಲಿ ಭೀತಿಯನ್ನು ಹೆಚ್ಚಿಸಿದ್ದು, ಇದು ಭಾರತದ ಮೇಲಿನ ಜಾಗತಿಕ ಪ್ರತಿಷ್ಠೆಗೆ ಹಾನಿ ಉಂಟುಮಾಡುತ್ತದೆ ಎಂದು ಉದ್ಯಮ ಮಂಡಳಿ ಎಚ್ಚರಿಸಿದೆ.
ಅಲ್ಪಕಾಲೀನ ರಾಜಕೀಯ ಲಾಭಕ್ಕಾಗಿ ಅಭಿವೃದ್ಧಿ ಮತ್ತು ಪ್ರಗತಿ ಪ್ರಕ್ರಿಯೆಗೆ ತಡೆಯೊಡ್ಡಬಾರದು. ಮತ್ತು ಇದನ್ನು ಕೇವಲ ಒಂದು ರಾಜ್ಯದ ಸಮಸ್ಯೆಯಾಗಿ ಪರಿಗಣಿಸಬಾರದು ಎಂದು ಸಿಐಐ ಒತ್ತಾಯಿಸಿದೆ.
ನ್ಯಾನೋ ಕಾರು ಯೋಜನೆಯು ವಿಶ್ವದ ಗಮನವನ್ನು ಸೆಳೆದಿದ್ದು, ಸಣ್ಣ ಕಾರು ಉತ್ಪಾದನಾ ಕೇಂದ್ರವಾಗಿ ಭಾರತವು ಹೊರಹೊಮ್ಮುವ ಸಂಭಾವ್ಯತೆಯಿದೆ ಎಂದು ಅದು ಹೇಳಿದೆ.
|