ವಿಶ್ವದ ಪ್ರಖ್ಯಾತ ಇಂಟರ್ನೆಟ್ ಸರ್ಚ್ ಇಂಜಿನ್ ನಿರ್ಮಾತೃ ಗೂಗಲ್ ಇಂಕ್, ತನ್ನ ಪ್ರತಿಸ್ಪರ್ಧಿ ಮೈಕ್ರೋಸಾಫ್ಟ್ ಕಾರ್ಪ್‌ಗೆ ಸವಾಲೆಂಬಂತೆ ತನ್ನದೇ ಆದ ವೆಬ್ ಬ್ರೌಸರ್‌ನ್ನು ಪ್ರಾರಂಭಿಸಿದೆ.
ಗೂಗಲ್ ಕ್ರೋಮ್ ಎಂಬ ನೂತನ ಸಾಫ್ಟ್‌ವೇರ್‌ನ ಪರೀಕ್ಷಾ ಆವೃತ್ತಿಯು 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಂಗಳವಾರದಿಂದ ದೊರೆಯಲಿದೆ ಎಂದು ಗೂಗಲ್ ತಿಳಿಸಿದೆ.
ಅತಿ ವೇಗದ, ಬಳಕೆದಾರ ಸ್ನೇಹಿ ಮತ್ತು ಸುರಕ್ಷಿತ ಬ್ರೌಸರನ್ನು ಬಳಕೆದಾರರಿಗೆ ನೀಡುವುದು ಗೂಗಲ್‌ನ ಮುಖ್ಯ ಉದ್ದೇಶವಾಗಿದೆ ಎಂದು ಕಂಪನಿ ತಿಳಿಸಿದೆ.
ವೆಬ್ ಬ್ರೌಸರ್‌ಗಳೆಂದರೆ, ಇಂಟರ್ನೆಟ್‌ಅನ್ನು ನ್ಯಾವಿಗೇಟ್ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುವ ಪ್ರೋಗ್ರಾಂಗಳಾಗಿವೆ. ಒಂದು ವೇಳೆ ಕ್ರೋಂ, ಬಳಕೆದಾರರನ್ನು ಸೆಳೆಯುವತ್ತ ಯಶಸ್ವಿಯಾದಲ್ಲಿ ಆನ್‌ಲೈನ್ ಜಾಹೀರಾತಿನಲ್ಲಿ ಈಗಾಗಲೇ ಉನ್ನತ ಸ್ಥಾನದಲ್ಲಿರುವ ಮತ್ತು ಇಮೇಲ್ ಹಾಗೂ ಇತರ ಪ್ರೋಗ್ರಾಂ ಸೇವೆಯನ್ನು ನೀಡುವ ಗೂಗಲ್ , ಉದ್ಯಮದಲ್ಲಿನ ತನ್ನ ಸ್ಥಾನವನ್ನು ಇನ್ನಷ್ಟು ದೃಢಗೊಳಿಸುತ್ತದೆ.
ಬ್ರೌಸರ್ ಕ್ಷೇತ್ರದಲ್ಲಿ ಸ್ಪರ್ಧೆಯು ಗಣನೀಯವಾಗಿ ಹೆಚ್ಚುತ್ತಿದ್ದು, ಪ್ರಸಕ್ತ ಉನ್ನತ ಸ್ಥಾನದಲ್ಲಿ ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ಉಳಿದುಕೊಂಡಿದೆ. ಆದರೆ, ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್‌ಪ್ಲೋರರ್ ಮಾರುಕಟ್ಟೆ ಪಾಲಿನಲ್ಲಿಯೂ ಶೇ.75ರಷ್ಟು ಕುಸಿತ ಉಂಟಾಗಿದೆ ಎಂದು ಮಾರುಕಟ್ಟೆ ಸಂಶೋಧಕರು ಹೇಳಿದ್ದಾರೆ.
ಶೇ.20ರ ಮಾರುಕಟ್ಟೆ ಪಾಲಿನೊಂದಿಗೆ, ಓಪನ್ ಸೋರ್ಸ್ ಪ್ರೋಗ್ರಾಂ ಫೈರ್‌ಫಾಕ್ಸ್ ಎರಡನೇ ಸ್ಥಾನದಲ್ಲಿದ್ದು, ಆಪಲ್ ಇಂಕ್‌ನ ಸಫಾರಿ ಮತ್ತೊಂದು ಪ್ರಮುಖ ಸ್ಪರ್ಧಿಯಾಗಿದೆ.
ಫಾರೆಕ್ಸ್‌ನಂತೆ ಕ್ರೋಂ ಓಪನ್ ಸೋರ್ಸ್ ಸಾಫ್ಟ್‌ವೇರ್ ಆಗಿ ಬಿಡುಗಡೆಗೊಳ್ಳಲಿದ್ದು, ಇಂತಹ ಸಾಫ್ಟ್‌ವೇರ್‌ಗಳನ್ನು ಸ್ವತಂತ್ರ ಪ್ರೋಗ್ರಾಮಿಂಗ್ ಮೂಲಕ ಅಭಿವೃದ್ಧಿಗೊಳಿಸಲು ಸಾಧ್ಯವಿದೆ.
|