ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ದೇಶದ ಜೀರಿಗೆ ರಫ್ತು ಪ್ರಮಾಣವು ಮೂರು ಪಟ್ಟು ಏರಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಜೀರಿಗೆ ಪೂರೈಕೆ ಕಡಿಮೆಯಾಗಿದ್ದುದರಿಂದ ಈ ಬಾರಿ 17,750 ಟನ್ ಜೀರಿಗೆ ರಫ್ತು ಮಾಡುವಲ್ಲಿ ಭಾರತ ಸಫಲವಾಗಿದೆ ಎಂದು ಸಂಬಾರ ಮಂಡಳಿ ಹೇಳಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಭಾರತದ ಜೀರಿಗೆ ರಫ್ತು ಪ್ರಮಾಣ ಕೇವಲ 5600 ಟನ್ ಆಗಿತ್ತು. ಜೀರಿಗೆ ಪ್ರಮುಖ ಉತ್ಪಾದಕ ರಾಷ್ಟ್ರವಾಗಿರುವ ಸಿರಿಯಾದಲ್ಲಿ ಉತ್ಪಾದನೆ ಕುಸಿತದಿಂದಾಗಿ, ಅದಕ್ಕೆ ಜಾಗತಿಕ ಬೇಡಿಕೆ ಪೂರೈಸಲು ಸಾಧ್ಯವಾಗಿರಲಿಲ್ಲ ಎಂದು ಸಂಬಾರ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲದೆ, ಟರ್ಕಿಯಂತಹ ರಾಷ್ಟ್ರಗಳಿಂದಲೂ ಜೀರಿಗೆ ರಫ್ತು ಕಡಿಮೆಯಾಗಿರುವುದು ಭಾರತದ ಅವಕಾಶ ಹೆಚ್ಚಿಸಲು ಕಾರಣವಾಯಿತು ಎಂದವರು ಹೇಳಿದರು.
ಮೌಲ್ಯದ ಆಧಾರದಲ್ಲಿ ಹೇಳುವುದಾದರೆ, ಏಪ್ರಿಲ್-ಜುಲೈ ಅವಧಿಯಲ್ಲಿ ರಫ್ತು ಪ್ರಮಾಣವು 174.69 ಕೋಟಿ ರೂಪಾಯಿಗೆ ಏರಿದೆ. ಕಳೆದ ಬಾರಿ ಇದೇ ಅವಧಿಯಲ್ಲಿ ಅದು 57.59 ಕೋಟಿ ರೂ. ಆಗಿತ್ತು.
ಈ ಹಣಕಾಸು ವರ್ಷದಲ್ಲಿ ಒಟ್ಟು 28 ಸಾವಿರ ಟನ್ ಜೀರಿಗೆ ರಫ್ತು ಮಾಡಲು ಸಂಬಾರ ಮಂಡಳಿಯು ಯೋಜನೆ ರೂಪಿಸಿತ್ತು. ಇದರಲ್ಲಿ ಈಗಾಗಲೇ 17,750 ಟನ್ ಜುಲೈವರೆಗಿನ ಅವಧಿಯಲ್ಲೇ ರಫ್ತಾಗಿದೆ. ಜಗತ್ತಿನ ಯಾವುದೇ ದೇಶದಲ್ಲಿ ಜೀರಿಗೆ ಉತ್ಪಾದನೆ ಕ್ಷೀಣವಾಗಿರುವುದರಿಂದಾಗಿ ಭಾರತದಿಂದ ಜೀರಿಗೆ ರಫ್ತು ಪ್ರಮಾಣ ಮುಂದಿನ ತಿಂಗಳುಗಳಲ್ಲಿ ಮತ್ತಷ್ಟು ಏರಿಕೆ ಕಾಣಲಿದೆ ಎಂದು ಪ್ರಮುಖ ರಫ್ತುದಾರ ಸಂಸ್ಥೆ ಜಬ್ಸ್ ಇಂಟರ್ನ್ಯಾಷನಲ್‌ನ ಆಡಳಿತ ನಿರ್ದೇಶಕ ಭಾಸ್ಕರ್ ಬಿ.ಶಾ ತಿಳಿಸಿದ್ದಾರೆ.
|