ಭಾರತ ಮತ್ತು ಚೀನಾದ ಅತಿ ಹೆಚ್ಚು ಬೇಡಿಕೆಯ ಕಾರಣದಿಂದಾಗಿ, ಏಶ್ಯಾದ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಗಣನೀಯ ಅಭಿವೃದ್ಧಿ ಉಂಟಾಗಿದೆ ಎಂದು ಉದ್ಯಮ ಅಧಿಕಾರಿಗಳು ತಿಳಿಸಿದ್ದಾರೆ.
ಸಂಖ್ಯೆಯ ಆಧಾರದಲ್ಲಿ ಏಶ್ಯಾವು ಜಗತ್ತಿನ ಅತಿ ದೊಡ್ಡ ಬ್ರಾಡ್‌ಬ್ಯಾಂಡ್ ಮಾರುಕಟ್ಟೆಯೆಂದು ಪರಿಗಣಿಸಲ್ಪಟ್ಟರೂ, ಉನ್ನತ ವೇಗದ ಇಂಟರ್ನೆಟ್ ಬಳಕೆ ಮುಂತಾದ ಅಂಶಗಳನ್ನು ಗಮನಿಸಿದರೆ, ಏಶ್ಯಾ ಅಮೆರಿಕದಿಂದ ಹಿಂದಿದೆ ಎಂದು ಅಂತಾರಾಷ್ಟ್ರೀಯ ಟೆಲಿಕಮ್ಯುನಿಕೇಶನ್ ಒಕ್ಕೂಟ(ಐಟಿಯು) ವರದಿಗಳು ತಿಳಿಸಿವೆ.
ಸುಮಾರು 191 ದೇಶಗಳ ಕಂಪನಿಗಳನ್ನು ಒಳಗೊಂಡಿರುವ ಸಮೂಹವಾಗಿರುವ ಐಟಿಯು ಬ್ಯಾಂಕಾಕ್‌ನಲ್ಲಿ ಈ ವಾರ ಉದ್ಯಮ ಸಮಾವೇಶವನ್ನು ನಡೆಸಿತ್ತು.
ಏಶ್ಯಾ ಪೆಸಿಫಿಕ್ ಪ್ರದೇಶವು ಸುಮಾರು 1.4 ಶತಕೋಟಿ ಮೊಬೈಲ್ ಫೋನ್ ಚಂದಾದಾರರನ್ನು ಹೊಂದಿದ್ದು, ಇದು ಜಾಗತಿಕ ಮಾರುಕಟ್ಟೆಯ ಶೇ.42ರಷ್ಟಾಗಿದೆ. ಮತ್ತು ಮುಂದಿನ ಎರಡು ವರ್ಷಗಳಲ್ಲಿ ಇದು ಶೇ.50ಕ್ಕೆ ಏರುವ ನಿರೀಕ್ಷೆಯಿದೆ ಎಂದು ಐಟಿಯುನ ಪ್ರಧಾನ ಕಾರ್ಯದರ್ಶಿ ಸಮಾವೇಶದಲ್ಲಿ ತಿಳಿಸಿದ್ದಾರೆ.
ಭಾರತ ಮತ್ತು ಚೀನಾ ಒಟ್ಟಾಗಿ ಸುಮಾರು 900 ಶತಕೋಟಿ ಸೆಲ್‌ಫೋನ್ ಚಂದಾದಾರರನ್ನು ಹೊಂದಿದ್ದು, ಇದು ವಿಶ್ವದ ಒಟ್ಟು ಚಂದಾದಾರರ ಸಂಖ್ಯೆಯ ನಾಲ್ಕನೆಯ ಒಂದು ಭಾಗದಷ್ಟಿದೆ.
ಪ್ರತಿ ತಿಂಗಳು ಭಾರತದಲ್ಲಿ ಒಂಭತ್ತು ದಶಲಕ್ಷ ನೂತನ ಚಂದಾದಾರರ ಸೇರ್ಪಡೆಯಾಗುತ್ತಿದ್ದು, ಇದು ಚೀನಾಕ್ಕಿಂತಲೂ ಹೆಚ್ಚಿನ ಪ್ರಮಾಣದ್ದಾಗಿದೆ. ಆದರೆ, ವಿಶ್ವದಲ್ಲೇ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಇಂಟರ್ನೆಟ್ ಮೊಬೈಲ್ ಸಂಪರ್ಕ ಹೊಂದಿರುವ ಚಂದಾದಾರರ ಸಂಖ್ಯೆಯು ಕೇವಲ 11 ದಶಲಕ್ಷದಷ್ಟಾಗಿದೆ ಎಂದು ಈ ಸಮಾವೇಶದ ವರದಿಗಳು ತಿಳಿಸಿವೆ.
|