ಭಾರತೀಯ ಕಾರು ಮಾರುಕಟ್ಟೆಯಲ್ಲಿ ಶೇ.ಹತ್ತರಷ್ಟು ಮಾರುಕಟ್ಟೆ ಪಾಲನ್ನು ಸಾಧಿಸುವ ಗುರಿಯೊಂದಿಗೆ, ಜಪಾನಿನ ಪ್ರಮುಖ ಕಾರು ನಿರ್ಮಾಣ ಸಂಸ್ಥೆ ಟೊಯೋಟಾ ಸೆಡಾನ್‌ನ ಸುಧಾರಿತ ಆವೃತ್ತಿ ಕೊರೋಲಾ ಆಲ್ಟಿಸ್‌ನ್ನು ಶುಕ್ರವಾರ ಬಿಡುಗಡೆಗೊಳಿಸಿದೆ.
ಇದರ ಬೆಲೆಯು 10.83ರಿಂದ 12.86 ಲಕ್ಷ ರೂಪಾಯಿಗಳಾಗಿದ್ದು, ಮೂರು ವಿವಿಧ ದರ್ಜೆಗಳಲ್ಲಿ 1.8 ಪೆಟ್ರೋಲ್ ಲೀಟರ್ ಇಂಜಿನ್‌ನನ್ನು ಈ ಕಾರು ಹೊಂದಿದೆ ಎಂದು ಕಂಪನಿ ಘೋಷಿಸಿದೆ.
ಪ್ರಸಕ್ತ ವರ್ಷದಲ್ಲಿ 63,000 ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಮತ್ತು 2015ರೊಳಗೆ ಶೇ.10ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳುವ ಗುರಿಯನ್ನು ಟೊಯೋಟಾ ಹೊಂದಿದೆ. ಈ ಗುರಿಯನ್ನು ಸಾಧಿಸುವಲ್ಲಿ ಆಲ್ಟಿಸ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್(ಟಿಕೆಎಂ)ನ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್ ಹೇಳಿದ್ದಾರೆ.
ಕಳೆದ ವರ್ಷ ಸುಮಾರು 50,000 ವಾಹನಗಳನ್ನು ಮಾರಾಟ ಮಾಡಿರುವ ಟೊಯೋಟಾ, ಪ್ರಸಕ್ತ ಭಾರತೀಯ ಪ್ರಯಾಣಿಕರ ಕಾರು ಮಾರುಕಟ್ಟೆಯಲ್ಲಿ ಶೇ.ಮೂರರಷ್ಟು ಪಾಲನ್ನು ಹೊಂದಿದೆ.
ಹತ್ತು ಶೇಕಡಾ ಮಾರುಕಟ್ಟೆ ಪಾಲನ್ನು ಪಡೆದುಕೊಳ್ಳುವ ತನ್ನ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ, ಭವಿಷ್ಯದಲ್ಲಿ ಕೆಲವು ನೂತನ ಮಾಡೆಲ್‌ಗಳನ್ನು ಬಿಡುಗಡೆಗೊಳಿಸಲಿದ್ದು, ಈ ತಿಂಗಳಲ್ಲಿ 2,000 ಕೊರೋಲಾ ಆಲ್ಟಿಸ್ ಮಾರಾಟ ಮಾಡುವ ಯೋಜನೆಯನ್ನು ಟಿಕೆಎಂ ಹೊಂದಿದೆ.
ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ ಸಣ್ಣ ಕಾರನ್ನು ಬಿಡುಗಡೆಗೊಳಿಸುವ ಉದ್ದೇಶದಿಂದ, ಸುಮಾರು 1,400 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಎರಡನೇ ನಿರ್ಮಾಣ ಕೇಂದ್ರ ಸೌಲಭ್ಯವನ್ನು ಸ್ಥಾಪಿಸುವುದಾಗಿ ಕಂಪನಿಯು ಈ ಮೊದಲು ಘೋಷಿಸಿತ್ತು.
|