ಪಶ್ಚಿಮಬಂಗಾಳ ಸಿಂಗೂರ್‌ನಿಂದ ಹೊರನಡೆಯಲು ನಿರ್ಧರಿಸಿರುವ ಟಾಟಾ ಸಂಸ್ಥೆಯು ನ್ಯಾನೋ ಘಟಕವನ್ನು ಧಾರವಾಡದಲ್ಲಿ ಸ್ಥಾಪಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಮತ್ತೊಮ್ಮೆ ಆಹ್ವಾನ ನೀಡಿದ್ದಾರೆ.
ನ್ಯಾನೋ ಘಟಕ ಸ್ಥಾಪನೆಗಾಗಿ ಧಾರವಾಡದಲ್ಲಿ ಒಂದು ಸಾವಿರ ಎಕರೆ ಭೂಮಿಯನ್ನು ನೀಡಲು ನಿರ್ಧರಿಸಿರುವುದಾಗಿ ಯಡಿಯೂರಪ್ಪ ಈ ಸಂದರ್ಭದಲ್ಲಿ ತಿಳಿಸಿದರು.
ಅದಕ್ಕೆ ಪೂರಕ ಎಂಬಂತೆ ಇಂದು ಬೆಂಗಳೂರಿನಲ್ಲಿ ಟಾಟಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರವಿಕಾಂತ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದರು.
ಟಾಟಾ ನ್ಯಾನೋ ಘಟಕ ಸ್ಥಾಪಿಸಲು ಸಂಸ್ಥೆಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಭರವಸೆ ನೀಡಿರುವುದಾಗಿ ಹೇಳಿದರು.
ಇದೀಗ ಟಾಟಾ ನ್ಯಾನೋ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರ ರತ್ನಗಂಬಳಿ ಹಾಸಿದ್ದು,ಟಾಟಾ ಅಧಿಕಾರಿಗಳು ತಮ್ಮ ಅಭಿಪ್ರಾಯವನ್ನು ಶೀಘ್ರವೇ ತಿಳಿಸಿದ್ದಾರೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.
ಅಲ್ಲದೇ ಕರ್ನಾಟಕದಲ್ಲಿ ನ್ಯಾನೋ ಘಟಕ ಸ್ಥಾಪಿಸಿಸುವ ಆಹ್ವಾನದ ಕುರಿತು ತಾವು ಯೋಚಿಸುತ್ತಿರುವುದಾಗಿ ಟಾಟಾ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮಬಂಗಾಳದಲ್ಲಿ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಯ ಹಾಗೂ ವಿರೋಧಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರ ನಡುವಿನ ಹಗ್ಗಜಗ್ಗಾಟ,ಪ್ರತಿಭಟನೆಗಳಿಂದ ತತ್ತರಿಸಿದ ಟಾಟಾ ಸಂಸ್ಥೆ ಸಿಂಗೂರ್‌ನಿಂದ ಹೊರನಡೆಯಲು ನಿರ್ಧರಿಸಿದೆ.
|