ಸರಕಾರಿ ಸ್ವಾಮ್ಯದ ಅನಿಲ ಕಂಪೆನಿಗಳು ದೇಶದಲ್ಲಿ ಎಲ್‌ಪಿಜಿ ಸಂಪರ್ಕ ಪಡೆಯಲು ಕಾಯ್ದಿರಿಸಿದ ಸುಮಾರು 8 ಲಕ್ಷ ಕುಟುಂಬಗಳಿಗೆ ಸಂಪರ್ಕ ನೀಡಲಾಗಿದ್ದು ಇನ್ನುಳಿದ ಗ್ರಾಹಕರಿಗೆ ಮುಂದಿನ ತಿಂಗಳಾಂತ್ಯದವರೆಗೆ ಸಂಪರ್ಕ ನೀಡಲು ಉದ್ದೇಶಿಸಿವೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದಿಯೋರಾ ಹೇಳಿದ್ದಾರೆ.
ಎಲ್‌ಪಿಜಿ ವಿತರಣೆಯಿಂದ ಭಾರೀ ನಷ್ಟ ಅನುಭವಿಸಿದ ಇಂಡಿಯನ್ ಆಯಿಲ್ , ಭಾರತ್ ಪೆಟ್ರೋಲಿಯಂ, ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಗಳು ಹೊಸ ಸಂಪರ್ಕವನ್ನು ನೀಡುವುದನ್ನು ನಿಲ್ಲಿಸಿದ್ದರಿಂದ ಜನಸಾಮಾನ್ಯರಿಗೆ ತೀವ್ರತೆರನಾದ ತೊಂದರೆ ಎದುರಾಗಿತ್ತು.
ಸಮಸ್ಯೆಯನ್ನು ಕೈಗೆತ್ತಿಕೊಂಡ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ದಿಯೋರಾ ಎರಡು ತಿಂಗಳೊಳಗಾಗಿ ಕಾಯ್ದಿರಿಸಿದ ಗ್ರಾಹಕರಿಗೆ ಎಲ್‌ಪಿಜಿ ಸಂಪರ್ಕವನ್ನು ನೀಡುವಂತೆ ಸೂಚನೆ ನೀಡಿದ್ದರು.
ಅನಿಲ ಸಂಸ್ಥೆಗಳ ಮುಖ್ಯಸ್ಥರು, ಪೆಟ್ರೋಲಿಯಂ ಕಾರ್ಯದರ್ಶಿ ಆರ್.ಎಸ್.ಪಾಂಡೆ ಅವರೊಂದಿಗೆ ಪರಿಶೀಲನಾ ಸಭೆಯನ್ನು ನಡೆಸಿದ್ದು ಮುಂದಿನ ತಿಂಗಳಲ್ಲಿ ಬರುವ ಈದ್, ದೀಪಾವಳಿ ,ದಸರಾ ಹಬ್ಬಗಳಿಗೆ ಗ್ರಾಹಕರಿಗೆ ಎಲ್‌ಪಿಜಿ ಕೊರತೆಯಾಗದಂತೆ ಅನಿಲ ಕಂಪೆನಿಗಳಿಗೆ ಆದೇಶಿಸಲಾಗಿದೆ ಎಂದು ದಿಯೋರಾ ತಿಳಿಸಿದ್ದಾರೆ.
ದೇಶದ ಅರ್ಧದಷ್ಟು ಕುಟುಂಬಗಳು ಎಲ್‌ಪಿಜಿ ಸೌಲಭ್ಯವನ್ನು ಪಡೆದಿದ್ದು, ಪ್ರಸ್ತುತ ಎಲ್‌ಪಿಜಿ ಗ್ರಾಹಕರ ಸಂಖ್ಯೆಯಲ್ಲಿ 8.2 ಕೋಟಿಯಿಂದ 10 ಕೋಟಿಗೆ ಹೆಚ್ಚು ಏರಿಕೆಯಾಗಿದೆ ಎಂದು ಸಚಿವ ದಿಯೋರಾ ತಿಳಿಸಿದ್ದಾರೆ.
|