ಅಮೆರಿಕದ ಅಮದು -ರಫ್ತು ಬ್ಯಾಂಕ್, ಭಾರತದ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾಗೆ ಬೋಯಿಂಗ್ ವಿಮಾನ ಖರೀದಿಗಾಗಿ 548.6 ಮಿಲಿಯನ್ ಡಾಲರ್ ಸಾಲವನ್ನು ಮಂಜೂರು ಮಾಡಿದೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ.
ಏರ್ ಇಂಡಿಯಾ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಘು ಮೆನನ್ ಮತ್ತು ಬ್ಯಾಂಕ್‌ನ ಮುಖ್ಯಸ್ಥ ಜೇಮ್ಸ್ ಲಾಂಬ್ರೈಟ್ ವಾಷಿಂಗ್ಟನ್‌ನ ಕೇಂದ್ರ ಕಚೇರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
68 ಬೋಯಿಂಗ್ ವಿಮಾನಗಳ ಖರೀದಿಗಾಗಿ ಅಮೆರಿಕದ ಬ್ಯಾಂಕ್ ಸಾಲವನ್ನು ಮಂಜೂರು ಮಾಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಏರ್ ಇಂಡಿಯಾ ಮುಖ್ಯಸ್ಥ ರಘು ಮೆನನ್ ಸಂತಸ ವ್ಯಕ್ತಪಡಿಸಿದ್ದಾರೆ.
ಆಧುನಿಕ ವಿಮಾನಗಳ ಖರೀದಿಯಿಂದಾಗಿ ಅಂತಾರಾಷ್ಟ್ರೀಯ ಸಂಪರ್ಕ ಜಾಲವನ್ನು ಹೆಚ್ಚಿಸಿ ಜಾಗತಿಕ ಮಟ್ಟದ ವೈಮಾನಿಕ ಕ್ಷೇತ್ರದಲ್ಲಿ ಏರ್ ಇಂಡಿಯಾ ಪ್ರಮುಖ ಹೆಜ್ಜೆಯನ್ನು ಮುಂದಿರಿಸಲಿದೆ ಎಂದು ಹೇಳಿದ್ದಾರೆ.
|