ಎರಡು ದಿನಗಳ ಹಿಂದೆಯಷ್ಟೇ ಸದ್ಯದಲ್ಲಿ ತೈಲ ಬೆಲೆ ಇಳಿಕೆಯಿಲ್ಲ ಎಂಬ ಹೇಳಿಕೆ ನೀಡಿದ್ದ ಪೆಟ್ರೋಲಿಯಂ ಸಚಿವ ಮುರಲಿ ದೇವ್ರಾ ಇದೀಗ ತನ್ನ ನಿಲುವನ್ನು ಬದಲಿಸಿದ್ದು, ಈ ವಾರಾಂತ್ಯದೊಳಗೆ ಪೆಟ್ರೋಲಿಯಂ ಬೆಲೆಯನ್ನು ಇಳಿಕೆಗೊಳಿಸುವುದಾಗಿ ಗುರುವಾರ ಮುನ್ಸೂಚನೆ ನೀಡಿದ್ದಾರೆ.
ಜಾಗತಿಕ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಉಂಟಾದ ಹಿನ್ನೆಲೆಯಲ್ಲಿ ಸರಕಾರವು ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ಅವರು ಲೋಕಸಭೆಯಲ್ಲಿ ಮಾತನಾಡುತ್ತ ಹೇಳಿದರು.
ವಿಮಾನಯಾನ ಕಂಪನಿಗಳಿಗೆ ಅನುದಾನವನ್ನು ನೀಡಿದ ಸರಕಾರವು, ಸಾಮಾನ್ಯ ಜನರಿಗೆ ಸರಕಾರವು ಯಾವಾಗ ಸಹಾಯ ಮಾಡುತ್ತದೆ ಎಂಬುದಾಗಿ ಸಿಪಿಐ(ಎಂ)ನ ರೂಪ್‌ಚಾಂದ್ ಪಾಲ್ ಸರಕಾರವನ್ನು ಪ್ರಶ್ನಿಸಿದ್ದರು.
ಆದರೆ, ವಿಮಾನಯಾನ ಕಂಪನಿಗಳಿಗೆ ನೀಡಿರುವುದು ಅನುದಾನವಲ್ಲ, ಕೇವಲ ತೈಲ ಕಂಪನಿಗಳಿಗೆ ನೀಡುವ ಸಾಲಮಿತಿಯ ಅವಧಿಯನ್ನು ಹೆಚ್ಚಿಸಿದೆ ಎಂದು ದೇವ್ರಾ ಸ್ಪಷ್ಟನೆ ನೀಡಿದ್ದಾರೆ.
ಜಾಗತಿಕ ಕಚ್ಚಾತೈಲ ಬೆಲೆಯಲ್ಲಿ ಇನ್ನಷ್ಟು ಇಳಿಕೆಗೆ ಸರಕಾರವು ಎದುರುನೋಡುತ್ತಿದ್ದು, ಆದರೆ, ವಿವಿಧ ಪಕ್ಷಗಳ ಒತ್ತಾಯದ ಮೇರೆಗೆ ತೈಲ ಬೆಲೆ ಇಳಿಕೆಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಅವರು ಹೇಳಿದರು. |