ಆರ್ಥಿಕ ಕುಸಿತದ ಭೀತಿಯಿಂದಾಗಿ ಇಳಿಮುಖಗೊಳ್ಳುತ್ತಿರುವ ತೈಲ ಬೆಲೆಯನ್ನು ನಿಯಂತ್ರಿಸುವ ಪ್ರಯತ್ನವೆಂಬಂತೆ, ಪ್ರತಿದಿನ 1.5 ಮಿಲಿಯನ್ ಬ್ಯಾರಲ್ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಒಪಿಇಸಿ ಶುಕ್ರವಾರ ಘೋಷಿಸಿದೆ.
ವಿಯೆನ್ನಾದಲ್ಲಿ ನಡೆದ ಒಪಿಇಸಿ ಸದಸ್ಯರನ್ನೊಳಗೊಂಡ ತುರ್ತು ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಪ್ರಮುಖ ಆರ್ಥಿಕತೆಗಳು ಆರ್ಥಿಕ ಕುಸಿತದ ಸಮೀಪದಲ್ಲಿರುವಾಗ ತೈಲ ಬೆಲೆ ಏರಿಸಲು ತೈಲ ಉತ್ಪಾದನೆಯನ್ನು ಇಳಿಕೆಗೊಳಿಸುವ ನಿರ್ಧಾರವು ಅವಿವೇಕತನದ ನಿರ್ಧಾರವಾಗಿದೆ ಎಂದು ಬ್ರಿಟಿಶ್ ಪ್ರಧಾನಿ ಗಾರ್ಡನ್ ಬ್ರೌನ್ ಇತ್ತೀಚೆಗೆ ತಿಳಿಸಿದ್ದರು.
ಏನೇ ಆದರೂ, ಒಪಿಇಸಿಯ ಎರಡನೇ ಅತಿ ದೊಡ್ಡ ತೈಲ ರಫ್ತು ರಾಷ್ಟ್ರವಾಗಿರುವ ಇರಾನ್ ಮತ್ತು ಲಿಬಿಯಾ ದೇಶವು ಪ್ರತಿದಿನ ಎರಡು ಮಿಲಿಯನ್ ಬ್ಯಾರಲ್ ತೈಲ ಉತ್ಪಾದನೆ ಇಳಿಕೆಗೊಳಿಸಲು ಕರೆ ನೀಡಿದ್ದು, ಕನಿಷ್ಟಪಕ್ಷ ಪ್ರತಿದಿನ ಒಂದು ಮಿಲಿಯನ್ ತೈಲ ಉತ್ಪಾದನೆಯು ಕಡಿತಗೊಳ್ಳಬೇಕು ಎಂದು ವೆನೆಜುಯೆಲಾ ಹೇಳಿತ್ತು.
ಆರ್ಥಿಕ ಕುಸಿತ ಭೀತಿಯು ಕಚ್ಚಾತೈಲ ಬೆಲೆಯಲ್ಲಿನ ಇಳಿಕೆಯ ಆತಂಕವನ್ನು ಉಂಟುಮಾಡಿದ್ದರಿಂದ ಗುರುವಾರದ ವಹಿವಾಟಿನಲ್ಲಿ ಜಾಗತಿಕ ಕಚ್ಚಾತೈಲ ಬೆಲೆಯು 16 ತಿಂಗಳಲ್ಲೇ ಅಧಿಕಮಟ್ಟದಲ್ಲಿ ಇಳಿಕೆಗೊಂಡಿತ್ತು. |