ಕಳೆದ ಕೆಲವು ತಿಂಗಳುಗಳಲ್ಲಿ ಶೇರುಪೇಟೆಯು 12000 ಅಂಶಗಳಷ್ಟು ದಾಖಲೆ ಕುಸಿತ ಕಾಣುವುದರೊಂದಿಗೆ, ಮುಂದಿನ ದಿನಗಳಲ್ಲಿ ಮಾರುಕಟ್ಟೆಯು 5000 ಗಡಿಗಿಂತ ಕೆಳಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಮಾರುಕಟ್ಟೆ ಪರಿಣಿತರು ವಿಶ್ಲೇಷಿಸಿದ್ದಾರೆ.ಮುಂಬಯಿ ಶೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ ಎರಡೂವರೆ ವರ್ಷದಲ್ಲೇ ಅಧಿಕ ಮಟ್ಟದಲ್ಲಿ 9000 ಗಡಿಮಟ್ಟಕ್ಕಿಂತ ಕೆಳಗಿಳಿದು, 8,701 ಅಂಕಗಳಿಗೆ ವಹಿವಾಟನ್ನು ಅಂತ್ಯಗೊಳಿಸಿ ಹೂಡಿಕೆದಾರರಿಗೆ ಕರಾಳ ಶುಕ್ರವಾರವೆನಿಸಿಕೊಂಡಿತ್ತು.ಜಾಗತಿಕ ಮಾರುಕಟ್ಟೆಯಲ್ಲಿ ಯಾವುದೇ ಚೇತರಿಕೆ ಕಂಡುಬರುವ ಲಕ್ಷಣಗಳು ಇಲ್ಲದೇ ಇರುವ ಕಾರಣ ಮತ್ತು ಅಭಿವೃದ್ಧಿ ರಾಷ್ಟ್ರಗಳಾದ ಅಮೆರಿಕ ಮತ್ತು ಇಂಗ್ಲಂಡ್ ಆರ್ಥಿಕ ಕುಸಿತದ ಹಾದಿಯಲ್ಲಿವೆ ಎಂಬ ವರದಿಗಳಿಂದ ಹೂಡಿಕೆದಾರರಲ್ಲಿ ಆತಂಕ ಹೆಚ್ಚಿಗೊಂಡಿರುವ ಕಾರಣ, ಭಾರತೀಯ ಮಾರುಕಟ್ಟೆಯಲ್ಲಿ ಶೇರು ಸೂಚ್ಯಂಕವು ಇನ್ನಷ್ಟು ಕುಸಿತ ಕಾಣುವ ಸಂಭವವಿದೆ ಎಂದು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.ಪ್ರಸಕ್ತ ಶೇರುಪೇಟೆಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಮುಂದಿನ ಆರು ತಿಂಗಳುಗಳಲ್ಲಿ ಶೇರುಪೇಟೆಯು 5000 ಗಡಿಗೆ ಇಳಿಕೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ಟಾರಸ್ ಮ್ಯೂಚುವಲ್ ಫಂಡ್ ಆಡಳಿತ ನಿರ್ದೇಶಕ ಆರ್.ಕೆ.ಗುಪ್ತಾ ಹೇಳುತ್ತಾರೆ.ಮುಂದಿನ ವಾರಗಳಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಂಡರೂ, ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುವವರೆಗೆ ಆರ್ಥಿಕ ಕುಸಿತದ ಭೀತಿಯು ಇದ್ದೇ ಇರುತ್ತದೆ. ಇದು ದೇಶೀಯ ಶೇರು ಮಾರುಕಟ್ಟೆಯ ಕುಸಿತವನ್ನು ಮುನ್ನಡೆಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಮಾರುಕಟ್ಟೆಯಲ್ಲಿ ಆತಂಕದ ಶೇರು ಮಾರಾಟ ಮತ್ತು ಹೂಡಿಕೆದಾರರಲ್ಲಿ ನಿರಾಶೆಯು ಮನೆಮಾಡಿದ್ದು, ಶೇರುಪೇಟೆಯಲ್ಲಿನ ಅಂತ್ಯದ ಪರಿಸ್ಥಿತಿಯ ಕುರಿತಾಗಿ ಏನೂ ಹೇಳಲು ಸಾಧ್ಯವಿಲ್ಲ ಎಂದು ಕೇರ್ಜಿವಾಲ್ ಸಂಶೋಧನಾ ಮತ್ತು ಬಂಡವಾಳ ಸೇವಾ ಅಧಿಕಾರಿ ಅರ್ಜುನ್ ಕೇರ್ಜಿವಾಲ ಹೇಳಿದ್ದಾರೆ. |
|