ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಸಣ್ಣ ಪ್ರಮಾಣದ ಹಿನ್ನಡೆ ಉಂಟಾಗಬಹುದೇ ಹೊರತು, ಕೆಲವು ಸುಧಾರಿತ ಆರ್ಥಿಕತೆಯಲ್ಲಿರುವಂತೆ ಆರ್ಥಿಕ ಕುಸಿತ ಉಂಟಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ರಾಜ್ಯಪಾಲ ಡಿ.ಸುಬ್ಬರಾವ್ ಸ್ಪಷ್ಟಪಡಿಸಿದ್ದಾರೆ.ಭಾರತದ ಅಭಿವೃದ್ಧಿ ಪಥವು ಮುಂದುವರಿಯಲಿದ್ದು, ಯಾವುದೇ ಆರ್ಥಿಕ ಹಿನ್ನಡೆ ಉಂಟಾದಲ್ಲಿ ಅದು ಕೇವಲ ಸ್ವಲ್ಪಮಟ್ಟಿನದಷ್ಟೇ ಆಗಲಿದೆ. ಅದು ಆರ್ಥಿಕ ಕುಸಿತವಾಗಿರುವುದಿಲ್ಲ ಎಂದು ಸುಬ್ಬರಾವ್ ಮುಂಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಭಾರತದ ಅಭಿವೃದ್ಧಿಯು ಮುಖ್ಯವಾಗಿ ದೇಶೀಯ ಬೇಡಿಕೆ ಮತ್ತು ವಿನಿಯೋಗದಿಂದ ಮುನ್ನಡೆಯುತ್ತಿರುವುದರಿಂದ, ಜಾಗತಿಕ ಆರ್ಥಿಕ ಪ್ರಕ್ಷುಬ್ಧತೆಯು ದೇಶದ ಮೇಲೆ ಅಷ್ಟೊಂದು ಪರಿಣಾಮವನ್ನು ಬೀರುವುದಿಲ್ಲ ಎಂದು ಸುಬ್ಬರಾವ್ ಪುನರುಚ್ಛರಿಸಿದ್ದಾರೆ.ಈ ನಡುವೆ, ಶುಕ್ರವಾರ ಘೋಷಿಸಿದ ಭಾರತೀಯ ರಿಸರ್ವ್ ಬ್ಯಾಂಕ್‌ನ ಸಾಲ ನೀತಿಯನ್ನು ಸಮರ್ಥಿಸಿಕೊಂಡಿರುವ ಸುಬ್ಬರಾವ್, ಹಣದುಬ್ಬರವು ಇನ್ನೂ ಆತಂಕಕಾರಿ ವಿಚಾರವೇ ಆಗಿರುವ ಕಾರಣ, ಕೇಂದ್ರ ಬ್ಯಾಂಕ್ ಅಭಿವೃದ್ಧಿಯೊಂದಿಗೆ ಬೆಲೆ ಮತ್ತು ಆರ್ಥಿಕ ಸ್ಥಿರತೆಯನ್ನು ಸರಿದೂಗಿಸಬೇಕಾಗಿತ್ತು ಎಂದಿದ್ದಾರೆ.ಅಕ್ಟೋಬರ್ 2-20ರ ನಡುವೆ ಭಾರತೀಯ ರಿಸರ್ವ್ ಬ್ಯಾಂಕಿಂಗ್ ವ್ಯವಸ್ಥೆಗೆ 1,85,000 ನಗದು ಹರಿವನ್ನು ತುಂಬಿದ್ದು, ಹಣಕಾಸು ಮಾರುಕಟ್ಟೆಯಲ್ಲಿ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಶೇ.ಒಂದರಷ್ಟು ರೇಪೋ ದರವನ್ನೂ ಆರ್‌ಬಿಐ ಕಡಿತಗೊಳಿಸಿತ್ತು ಎಂದು ಅವರು ಸೂಚಿಸಿದ್ದಾರೆ. |
|