ಆರ್ಥಿಕ ಪ್ರಕ್ಷುಬ್ಧತೆಯ ಜೊತೆಗೆ ವೆಚ್ಚ ಕಡಿತಗೊಳಿಸುವ ನಿಟ್ಟಿನಲ್ಲಿ ಮುಂದಿನ ಹತ್ತು ದಿನಗಳಲ್ಲಿ ಭಾರತೀಯ ಸಂಸ್ಥೆಗಳು ಶೇ.25ರಷ್ಟು ನೌಕರರನ್ನು ವಜಾ ಮಾಡುವ ಸಾಧ್ಯತೆ ಇದೆ ಎಂದು ಉದ್ಯಮ ಮಂಡಳಿ ಅಸೋಚಾಂ ತಿಳಿಸಿದೆ.
ಸ್ಟೀಲ್, ಸಿಮೆಂಟ್, ನಿರ್ಮಾಣ, ಸ್ಥಿರಾಸ್ಥಿ, ವಿಮಾನಯಾನ, ಐಟಿ ಆಧಾರಿತ ಸೇವೆ, ಹಣಕಾಸು ಸೇವಾ ಮುಂತಾದ ಕ್ಷೇತ್ರಗಳಲ್ಲಿ ಉದ್ಯೋಗ ಕಡಿತ ಉಂಟಾಗುವ ಸಂಭವವಿದೆ ಎಂದು ಉದ್ಯಮ ಮಂಡಳಿ ಅಸೋಚಾಂ ಹೇಳಿದೆ.
ಕಳೆದ ಆರು ತಿಂಗಳುಗಳಲ್ಲಿ ಏಶಿಯಾದ ಮೂರನೇ ಅತಿ ದೊಡ್ಡ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಇಳಿಕೆ ಉಂಟಾಗಿದ್ದು, ಗರಿಷ್ಠ ಮಟ್ಟದ ಬಡ್ಡಿ ದರ, ಬೇಡಿಕೆಯಲ್ಲಿ ಕುಂಠಿತ ಮತ್ತು ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದಾಗಿ ಈ ಸ್ಥಿತಿ ಬಂದೊದಗಿದೆ ಎಂದು ಉದ್ಯಮ ಮಂಡಳಿ ಅಭಿಪ್ರಾಯಪಟ್ಟಿದೆ.
ಕಳೆದ ವಾರ, ಮಾರಾಟದಲ್ಲಿ ಇಳಿಕೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಿರಾಸ್ತಿ ಸಂಸ್ಥೆ ಪಾರ್‌ಶ್ವನಾಥ್ ಲಿ. ಉದ್ಯೋಗ ಕಡಿತದ ಮುನ್ಸೂಚನೆಯನ್ನು ನೀಡಿತ್ತು. ಅಲ್ಲದೆ, ಬೇಡಿಕೆ ಕುಂಠಿತ ಮತ್ತು ಇಂಧನ ಬೆಲೆ ಹೆಚ್ಚಳದಿಂದಾಗಿ ಖಾಸಗಿ ವಿಮಾನ ಸಂಸ್ಥೆ ಜೆಟ್ ಏರ್‌ವೇಯ್ಸ್ 1,900 ನೌಕರರನ್ನು ವಜಾ ಮಾಡಿತ್ತು. ಆದರೆ, ಪ್ರತಿಭಟನೆ ಮತ್ತು ರಾಜಕೀಯ ಒತ್ತಡಗಳಿಂದಾಗಿ ಮರುಸೇರ್ಪಡೆಗೊಳಿಸಿತ್ತು. |