ಆರ್‌ಬಿಐ ಶನಿವಾರ ತೆಗೆದುಕೊಂಡಿರುವ ಕೆಲವು ಕ್ರಮಗಳಿಂದಾಗಿ ಬಡ್ಡಿದರಗಳು ಕೂಡಲೇ ಇಳಿಕೆಯಾಗಲಿದ್ದು, ಸಾಲವು ಅಗ್ಗವಾಗಲಿದೆ ಮತ್ತು ಉಳಿತಾಯ ಆಕರ್ಷಣೀಯವಾಗಲಿದೆ. ರಿಸರ್ವ್ ಬ್ಯಾಂಕ್ ಅಲ್ಪಾವಧಿ ಸಾಲದ ದರದಲ್ಲಿ 0.5 ಶೇ. ಕಡಿತ ಮಾಡಿರುವುದರಿಂದ ಬ್ಯಾಂಕಿಂಗ್ ವ್ಯವಸ್ಥೆಗೆ 1,20,000 ಕೋಟಿ ರೂ.ಹರಿದುಬರಲಿದೆ. ಗ್ರಾಹಕರಿಗೆ ವಿಧಿಸುವ ಬಡ್ಡಿದರದಲ್ಲಿ ಕಡಿತಮಾಡುವಂತೆ ಕೆಲವು ದಿನಗಳಿಂದ ಬ್ಯಾಂಕ್‌ಗಳ ಮೇಲೆ ಒತ್ತಡ ಹೇರಲಾಗುತ್ತಿದೆ.
ಇದರಿಂದಾಗಿ ಗೃಹಸಾಲ, ಕಾರು ಮತ್ತಿತರ ಗ್ರಾಹಕವಸ್ತುಗಳ ಮೇಲಿನ ಸಾಲದ ಶೇ. 0.5ರಷ್ಟು ಅಗ್ಗವಾಗಲಿದೆಯೆಂದು ನಿರೀಕ್ಷಿಸಲಾಗಿದೆ.ಆರ್‌ಬಿಐ ಶನಿವಾರ ತನ್ನ ಮಧ್ಯಾವಧಿ ಪರಾಮರ್ಶೆ ನೀತಿಯಲ್ಲಿ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಅಲ್ಪಾವಧಿ ಸಾಲದ ದರವಾದ ರೆಪೊ ದರವು ನ.3ರಿಂದ ಶೇ.8ರಿಂದ ಶೇ.7.5ಕ್ಕೆ ಇಳಿಕೆಯಾಗುತ್ತದೆ ಎಂದು ಪ್ರಕಟಿಸಿದೆ. ಇದರಿಂದ ಬ್ಯಾಂಕುಗಳು ಗ್ರಾಹಕರಿಗೆ ವಿಧಿಸುವ ಬಡ್ಡಿದರದಲ್ಲಿ ಕಡಿತಮಾಡಲು ಸುಲಭವಾಗುತ್ತದೆ.
ಏಕಕಾಲದಲ್ಲಿ ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಠೇವಣಿಯಾದ ಸಿಆರ್‌ಆರ್‌ನಲ್ಲಿ ಎರಡು ಹಂತಗಳ ಕಡಿತವಾಗಲಿದ್ದು, ಅದು ಶೇ.6.5ರಿಂದ ಶೇ.5.5ಕ್ಕೆ ಕುಸಿಯಲಿದೆ. ಇದು ಬ್ಯಾಂಕುಗಳಿಗೆ ಹೆಚ್ಚುವರಿ 40,000 ಕೋಟಿ ಸಾಲ ನೀಡಲು ಅವಕಾಶವಾಗುತ್ತದೆ. |