ಇಂಟರ್ನೆಟ್ ದೈತ್ಯ ಸಂಸ್ಥೆ ಯಾಹೂ ಖರೀದಿಗೆ ಇನ್ನೂ ತಾನು ಆಸಕ್ತವಾಗಿರುವುದಾಗಿ ಹಬ್ಬಿರುವ ವದಂತಿಗಳನ್ನು ಸಾಫ್ಟ್‌ವೇರ್ ದಿಗ್ಗಜ ಸಂಸ್ಥೆ ಮೈಕ್ರೋಸಾಫ್ಟ್ ಸ್ಪಷ್ಟವಾಗಿ ತಳ್ಳಿ ಹಾಕಿದೆ.
"ನಾವೊಂದು ಪ್ರಸ್ತಾಪ ಮುಂದಿಟ್ಟೆವು, ಮತ್ತೊಂದನ್ನೂ ಮುಂದಿಟ್ಟೆವು... ಒಪ್ಪಲಿಲ್ಲ. ಕೊನೆಗೆ ನಮ್ಮ ಪಾಡು ನಮಗೆ" ಎಂದು ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸ್ಟೀವ್ ಬಾಲ್ಮರ್ ಅವರು ಸಿಡ್ನಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದರು. ಯಾಹೂ ಮತ್ತು ಗೂಗಲ್ ನಡುವಣ ನಡೆಯುತ್ತಿದ್ದ ಖರೀದಿ ಮಾತುಕತೆಯು ಮುರಿದು ಬಿದ್ದ ಹಿನ್ನೆಲೆಯಲ್ಲಿ ಅವರ ಪ್ರತಿಕ್ರಿಯೆ ಕೇಳಲಾಗಿತ್ತು.
"ಒಂದು ಹಂತದಲ್ಲಿ ನಾವು ಪಾಲುದಾರಿಕೆಗೆ ಒಪ್ಪಿದೆವು. ಅದು ಸ್ವೀಕಾರವಾಗಲಿಲ್ಲ. ಇದಕ್ಕಾಗಿ ನಮ್ಮ ದಾರಿ ನಮಗೆ, ಅವರ ದಾರಿ ಅವರಿಗೆ. ಮರಳಿ ಅವರ ಬಳಿಗೆ ಹೋಗುವುದಕ್ಕಾಗಲೀ, ಅದನ್ನು ಖರೀದಿಸುವುದರಲ್ಲಾಗಲೀ ನಮಗೆ ಆಸಕ್ತಿ ಇಲ್ಲ" ಎಂದು ಬಾಲ್ಮರ್ ಸ್ಪಷ್ಟವಾಗಿ ಹೇಳಿದ್ದಾರೆ.
ಸರ್ಚ್ ಎಂಜಿನ್ ವಿಭಾಗದಲ್ಲಿ ಮಾತ್ರ ಇನ್ನೂ ಒಂದಷ್ಟು ಪಾಲುದಾರಿಕೆಯ ಅವಕಾಶಗಳಿದ್ದವು ಎಂದು ಭಾವಿಸಿದ್ದೆ ಎಂಬುದನ್ನೂ ಅವರು ಹೇಳಿದರು. ಯಾಹೂವನ್ನು ಪ್ರತಿ ಶೇರಿಗೆ 17ರಿಂದ 19 ಡಾಲರ್‌ವರೆಗಿನ ಮೊತ್ತದಲ್ಲಿ ಮೈಕ್ರೋಸಾಫ್ಟ್ ಖರೀದಿಸುವ ಮಾತುಕತೆ ಪ್ರಗತಿಯಲ್ಲಿದೆ ಎಂಬ ವದಂತಿ ಬಗ್ಗೆ ಬ್ಲಾಗೊಂದರಲ್ಲಿ ಮಾಹಿತಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಯಾಹೂ ಶೇರುಗಳು ಚೇತರಿಕೆ ಕಂಡ ಎರಡು ದಿನಗಳ ಬಳಿಕ ಬಾಲ್ಮರ್ ಹೇಳಿಕೆ ಹೊರಬಿದ್ದಿದೆ. ಇದಲ್ಲದೆ ಯಾಹೂ ಸಿಇಒ ಜೆರಿ ಯಾಂಗ್ ಅವರು ಪದತ್ಯಾಗ ಮಾಡಲಿದ್ದಾರೆ ಎಂದೂ ಬ್ಲಾಗಿನಲ್ಲಿ ವರದಿಯಾಗಿತ್ತು.
ಇದನ್ನು ಆ ಬಳಿಕ ಯಾಹೂ ತಳ್ಳಿ ಹಾಕಿತ್ತು. ಸರ್ಚ್ ಎಂಜಿನ್ ವಿಭಾಗದ ಅಗ್ರ ಸಂಸ್ಥೆ ಗೂಗಲ್‌ಗೆ ಸೂಕ್ತ ಪ್ರತಿಸ್ಪರ್ಧೆ ಒಡ್ಡುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್ ಕಂಪನಿಯು 47.5 ಶತಕೋಟಿ ಡಾಲರ್‌ಗೆ ಯಾಹೂ ಖರೀದಿಗೆ ಮುಂದಾಗಿತ್ತು. ಮೇ ತಿಂಗಳಲ್ಲಿ ಉಭಯ ಕಂಪನಿಗಳ ನಡುವಣ ಮಾತುಕತೆ ಮುರಿದುಬಿದ್ದಿತ್ತು. ಜೂನ್ ತಿಂಗಳಲ್ಲಿ ಇಂಟರ್ನೆಟ್ ಸರ್ಚ್ ವಿಭಾಗದ ನಂ.1 ಮತ್ತು ನಂ.2 ಸ್ಥಾನದಲ್ಲಿರುವ ಗೂಗಲ್ ಮತ್ತು ಯಾಹೂಗಳು ಪರಸ್ಪರ ಮಾತುಕತೆ ಆರಂಭಿಸಿದ್ದವು. ಆದರೆ ಕಾನೂನು ಸಂಬಂಧಿತ ತೊಡಕುಗಳಲ್ಲಿ ಮುಂದುವರಿಯಲಾಗುವುದಿಲ್ಲ ಎಂಬ ಕಾರಣಕ್ಕೆ ಗೂಗಲ್ ಈ ವ್ಯವಹಾರದಿಂದ ಹಿಂದೆ ಸರಿದಿತ್ತು. |