ಜಾಗತಿಕ ಆರ್ಥಿಕ ಕುಸಿತವಿದ್ದರೂ, ಮುಂಬರುವ 2009ರಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಯು ಶೇ7ರಿಂದ 7.50ರ ಆರೋಗ್ಯಕರ ದರದಲ್ಲಿ ಮುಂದುವರಿಯಲಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಜಾಗತಿಕ ಹಣಕಾಸು ಬಿಕ್ಕಟ್ಟಿನ ಕಾರಣ ಅಭಿವೃದ್ಧಿ ದರವು ಮುಂದಿನ ವರ್ಷ ಕುಸಿಯಬಹುದಾದರೂ, ಅದು ಶೇ7ರಿಂದ 7.5ರ ದರದಲ್ಲಿ ಮುಂದುವರಿಯಲಿದೆ ಎಂಬ ವಿಶ್ವಾಸ ಇದೆ ಎಂಬುದಾಗಿ ನುಡಿದರು. ಅವರು ಒಮನ್‌ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ರಿಸರ್ವ್ ಬ್ಯಾಂಕ್ ಈ ತಿಂಗಳ ಆದಿಯಲ್ಲಿ ಬಿಡುಗಡೆ ಮಾಡಿರುವ ಅಭಿವೃದ್ಧಿ ದರದ ಅಂದಾಜು ಶೇ.7.7 ಆಗಿದ್ದು, ಪ್ರಧಾನಿಯವರ ನಿರೀಕ್ಷೆ ಇದಕ್ಕಿಂತ ಕಡಿಮೆ ಇದೆ.
ಆದರೆ, ಅತಾರಾಷ್ಟ್ರೀಯ ಹಣಕಾಸು ನಿಧಿಯ ವಿಶ್ವ ಆರ್ಥಿಕ ನೋಟದ ಅಂದಾಜು ಇನ್ನೂ ಕಡಿಮೆ ಇದ್ದು, ಅದರ ಪ್ರಕಾರ ಮುಂದಿನ ವರ್ಷದ ಅಭಿವೃದ್ಧಿ ದರ ಶೇ.6.3ಆಗಿದೆ. |