ಹಬ್ಬದ ಸಂದರ್ಭಗಳಲ್ಲಿ ಉತ್ಸಾಹದ ಚಿಲುಮೆಯಾಗುತ್ತಿದ್ದ ಭಾರತದ ಅಟೋಮೊಬೈಲ್ ಕ್ಷೇತ್ರ ಪ್ರಸಕ್ತ ವರ್ಷದಲ್ಲಿ ಕಳೆಗುಂದಿದೆ. ಆರ್ಥಿಕ ಬಿಕ್ಕಟ್ಟು ಹಾಗೂ ಹಣಕಾಸು ಸಂಸ್ಥೆಗಳ ಬಡ್ಡಿ ದರ ಹೆಚ್ಚಳದಿಂದಾಗಿ ದೇಶಿಯ ವಾಹನಗಳ ಮಾರಾಟದಲ್ಲಿ ಶೇ.14.42ರಷ್ಟು ಕುಸಿತ ಕಂಡಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ 10,11,221 ವಾಹನಗಳನ್ನು ಮಾರಾಟ ಮಾಡಿದ್ದು, ಪ್ರಸಕ್ತ ವರ್ಷ 8,65,404 ವಾಹನಗಳನ್ನು ಮಾತ್ರ ಮಾರಾಟ ಮಾಡಲಾಗಿದೆ. ಪ್ಯಾಸೆಂಜರ್ ಕಾರು, ದ್ವಿಚಕ್ರವಾಹನಗಳು ಮತ್ತು ವಾಣಿಜ್ಯ ವಾಹನಗಳ ಮಾರಾಟದಲ್ಲಿ ಕುಸಿತವಾಗಿದೆ ಎಂದು ವಹಿವಾಟುದಾರರು ತಿಳಿಸಿದ್ದಾರೆ.
ಭಾರತೀಯ ಅಟೋಮೊಬೈಲ್ ಉತ್ಪಾದಕ ಸಮಿತಿಯ ಪ್ರಕಾರ, ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 1,05,877 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಆದರೆ ಪ್ರಸಕ್ತ ಆರ್ಥಿಕ ಸಾಲಿನಲ್ಲಿ 98,900 ವಾಹನಗಳನ್ನು ಮಾರಾಟ ಮಾಡಲಾಗಿದ್ದು ಶೇ.6.59 ರಷ್ಟು ಕುಸಿತ ಕಂಡಿದೆ ಎಂದು ವರದಿ ಮಾಡಿದೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 6,57,874 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿದ್ದು, ಪ್ರಸಕ್ತ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 5,38,353 ವಾಹನಗಳನ್ನು ಮಾರಾಟ ಮಾಡಲಾಗಿದ್ದು, ಶೇ.18.17 ರಷ್ಟು ಇಳಿಕೆ ಕಂಡಿದೆ. ವಾಣಿಜ್ಯ ವಾಹನಗಳ ಮಾರಾಟದಲ್ಲಿ ಕೂಡಾ ಶೇ.35.95 ರಷ್ಟು ಇಳಿಕೆಯಾಗಿದೆ ಎಂದು ಸಮಿತಿ ಪ್ರಕಟಿಸಿದೆ.
ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಆರ್ಥಿಕ ಕುಸಿತ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳು ತೃಪ್ತಿಕರವಾಗಿಲ್ಲ.ಇದರಿಂದ ಪ್ರಸ್ತುತ ಎದುರಾಗಿರುವ ಸಮಸ್ಯೆಗಳನ್ನು ನಿಯಂತ್ರಿಸಲು ಮಾತ್ರ ಸಾಧ್ಯವಾಗುತ್ತದೆ ಎಂದು ಸಮಿತಿಯ ಪ್ರಧಾನ ನಿರ್ದೇಶಕ ದೀಲಿಪ್ ಶೆನಾಯಿ ಅಭಿಪ್ರಾಯಪಟ್ಟಿದ್ದಾರೆ. |