ದೇಶದ ಎರಡನೇ ಪ್ರಮುಖ ಅಟೋಮೊಬೈಲ್ ಕಾರು ತಯಾರಿಕೆ ಕಂಪೆನಿ ಹುಂಡೈ , ಸಾಂಟ್ರೊ ಮಾಡೆಲ್‌ಗಿಂತ ಚಿಕ್ಕ ಕಾರನ್ನು ಶೀಘ್ರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ.
ಸಾಂಟ್ರೊಗಿಂತ ಚಿಕ್ಕ ಕಾರನ್ನು ತಯಾರಿಸುವ ಸಿದ್ದತೆ ಜಾರಿಯಲ್ಲಿದ್ದು, ಮುಂಬರುವ 2011ರಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎಂದು ಹುಂಡೈ ಮೋಟಾರ್ ಇಂಡಿಯಾದ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಅರವಿಂದ್ ಸೆಕ್ಸೆನಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕಾರು ಮಾರುಕಟ್ಟೆ ತೀವ್ರ ತೊಂದರೆಗೊಳಗಾಗಿದ್ದರಿಂದ ಸದ್ಯಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಆದರೆ ಹುಂಡೈ ಕಂಪೆನಿ ಬೃಹತ್ ರಫ್ತು ಮೂಲವನ್ನು ಹೊಂದಿರುವುದರಿಂದ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಸಕ್ಸೆನಾ ಹೇಳಿದ್ದಾರೆ.
ಹುಂಡೈ ಕಂಪೆನಿಗೆ ಮುಂಬರುವ ಮೂರರಿಂದ ನಾಲ್ಕು ತಿಂಗಳ ಅವಧಿಗೆ ಅಪಾರ ಬೇಡಿಕೆಗಳು ಬಂದಿರುವುದರಿಂದ ಸಮಯದ ಅಭಾವ ಎದುರಾಗಿದೆ. ಪ್ರಸಕ್ತ ವರ್ಷದಲ್ಲಿ 2,50 ಲಕ್ಷ ಕಾರುಗಳನ್ನು ರಫ್ತು ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ಎಚ್‌ಎಂಐಎಲ್ ಮಾಡೆಲ್‌ನ 20 ಲಕ್ಷ ಕಾರುಗಳನ್ನು ಮಾರಾಟ ಮಾಡುವ ಗುರಿಯನ್ನು ತಲುಪಿದ್ದರಿಂದ ಸಂಭ್ರಮಾಚರಣೆಯ ಅಂಗವಾಗಿ ಕೊನೆಯ ಕಾರನ್ನು ' ಕ್ರೈ' ಸೇವಾ ಸಂಸ್ಥೆಯ ನಿರ್ದೇಶಕ ಇರ್ವಿನ್ ಫರ್ನಾಂಡಿಸ್ ಅವರಿಗೆ ಉಚಿತವಾಗಿ ನೀಡಲಾಗಿದ್ದು, ಹುಂಡೈ ಬ್ರ್ಯಾಂಡ್ ಅಂಬಾಸಿಡರ್ ಶಾರೂಖ್ ಖಾನ್ ಕೀ ಯನ್ನು ಸಮರ್ಪಿಸಿದರು ಎಂದು ಸೆಕ್ಸೆನಾ ತಿಳಿಸಿದ್ದಾರೆ. |