ಕಳೆದ 14 ವರ್ಷಗಳ ಹಿಂದೆ ಸ್ಥಾಪಿಸಲಾಗಿದ್ದ ಅಂತರ್ಜಾಲ ಕಂಪೆನಿಯ ಸಹ-ಸಂಸ್ಥಾಪಕ ಜೆರ್ರಿ ಯಾಂಗ್ ಅವರನ್ನು ಸೂಕ್ತ ವ್ಯಕ್ತಿ ದೊರೆತ ನಂತರ ಅವರನ್ನು ಬದಲಿಸಲಾಗುವುದು ಎಂದು ಯಾಹೂ ಕಂಪೆನಿ ತಿಳಿಸಿದೆ.
ಕಳೆದ ಆರು ತಿಂಗಳುಗಳ ಹಿಂದೆ ಮೈಕ್ರೋಸಾಫ್ಟ್ ಕಾರ್ಪೋರೇಶನ್‌ಗೆ 47.5 ಬಿಲಿಯನ್ ಡಾಲರ್‌ಗೆ ಯಾಹೂ ಕಂಪೆನಿಯನ್ನು ಮಾರಾಟ ಮಾಡುವುದನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಯಾಂಗ್ ತಿರಸ್ಕರಿಸಿದ ನಂತರ ಕಂಪೆನಿಯ ಶೇರುದಾರರಲ್ಲಿ ಅಸಮಧಾನ ಮೂಡಿದ್ದು, ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಅಡಳಿತ ಮಂಡಳಿಯ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ .
2003ರಿಂದ ಯಾಹೂ ಶೇರುಗಳ ದರಗಳು ಭಾರಿ ಕುಸಿತ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಯಾಂಗ್ ಅವರನ್ನು ಸಿಇಒ ಹುದ್ದೆಯಿಂದ ತೆಗೆಯುವಂತೆ ಶೇರುದಾರರು ಅಡಳಿತ ಮಂಡಳಿಯ ಮೇಲೆ ಒತ್ತಡವನ್ನು ಹೇರಿದ್ದರು. ಆದರೆ ತಾವು ಅಧಿಕಾರದಲ್ಲಿರಲು ಬಯಸುವುದಾಗಿ ಯಾಂಗ್ ಸಾರ್ವಜನಿಕ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದರೂ ಶೇರುದಾರರ ಒತ್ತಡದಿಂದಾಗಿ ಅವರನ್ನು ಬದಲಾಯಿಸಲು ಯಾಹೂ ಅಡಳಿತ ಮಂಡಳಿ ಕೊನೆಗೆ ಸಮ್ಮತಿಸಿದೆ ಎಂದು ಪ್ರಕಟಿಸಿದೆ.
ಯಾಹೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯಿಂದ ಯಾಂಗ್ ಅವರನ್ನು ಬದಲಾಯಿಸಿದ ನಂತರ ಅಡಳಿತ ಮಂಡಳಿಯಲ್ಲಿ ಯಾಹೂ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ ಎಂದು ಅಡಳಿತ ಮಂಡಳಿಯ ಮೂಲಗಳು ತಿಳಿಸಿವೆ. |