ಆರ್ಥಿಕ ಕುಸಿತದಿಂದಾಗಿ ವಾಹನಗಳ ಬೇಡಿಕೆ ಕುಸಿತಗೊಂಡ ಹಿನ್ನೆಲೆಯಲ್ಲಿ, ಉತ್ತರ ಅಮೆರಿಕದಲ್ಲಿರುವ ಘಟಕಗಳಲ್ಲಿ 18 ಸಾವಿರ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೊಂಡಾ ಮೋಟಾರ್ ಕಂಪೆನಿಯ ಮೂಲಗಳು ತಿಳಿಸಿವೆ.
ಹೊಂಡಾ ಕಂಪೆನಿಯ ವಕ್ತಾರ ಇ.ಡಿ.ಮಿಲ್ಲರ್ ಮಾತನಾಡಿ, ಜಾಗತಿಕ ಆರ್ಥಿಕ ಮಾರುಕಟ್ಟೆ ಕುಸಿದ ಹಿನ್ನೆಲೆಯಲ್ಲಿ ಬೇಡಿಕೆಗಳಲ್ಲಿ ಇಳಿಕೆಯಾಗಿರುವುದರಿಂದ ಅಗಸ್ಟ್ ತಿಂಗಳಿನಿಂದ ಇಲ್ಲಿಯವರೆಗೆ 50 ಸಾವಿರ ವಾಹನಗಳ ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ಉತ್ತರ ಅಮೆರಿಕದ ಅಲಬಾಮಾದಲ್ಲಿರುವ ಘಟಕದಲ್ಲಿ 12 ಸಾವಿರ ವಾಹನಗಳ ಉತ್ಪಾದನೆ ಸ್ಥಗಿತಗೊಳಿಸಲಾಗಿದ್ದು, ಒಹಿಯೊದಲ್ಲಿರುವ ಈಸ್ಟ್ ಲಿಬರ್ಟಿಯಲ್ಲಿ 6 ಸಾವಿರ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಿಲ್ಲರ್ ತಿಳಿಸಿದ್ದಾರೆ.
ಉತ್ಪಾದನೆಯನ್ನು ಕಡಿತಗೊಳಿಸುವುದರಿಂದ ನೌಕರರನ್ನು ವಜಾಮಾಡಲಾಗುವದಿಲ್ಲ. ಆದರೆ ಉತ್ಪಾದನೆಯನ್ನು ನಿಧಾನಗತಿಯಲ್ಲಿ ಮುಂದುವರಿಸಿಕೊಂಡು ಹೋಗಲಾಗುವುದು ಎಂದು ಮಿಲ್ಲರ್ ಹೇಳಿದ್ದಾರೆ. |