ದೇಶದ ಕೆಲ ರಾಜ್ಯಗಳಲ್ಲಿ ವಿಧಾನಸಭೆಗೆ ಚುನಾವಣೆ ದಿನಾಂಕಗಳು ಘೋಷಣೆಯಾದ ಹಿನ್ನೆಲೆಯಲ್ಲಿ, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಡಿಸೆಂಬರ್ 24 ರ ನಂತರ ತೈಲ ದರಗಳಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ಹೇಳಿದ್ದಾರೆ.
ದೇಶದ ಕೆಲ ರಾಜ್ಯಗಳಲ್ಲಿ ವಿಧಾನಸಭೆಗೆ ಚುನಾವಣೆಗಳು ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೇಂದ್ರ ಸರಕಾರಕ್ಕೆ ತೈಲ ದರ ಇಳಿಕೆಯನ್ನು ಪ್ರಕಟಿಸಲು ಸಾಧ್ಯವಾಗದು ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ಪ್ರತಿ ಬ್ಯಾರೆಲ್‌ಗೆ 147 ಡಾಲರ್‌ಗಳಿಗೆ ಏರಿಕೆಯಾಗಿದ್ದ ತೈಲ ದರ, ಪ್ರಸ್ತುತ ಪ್ರತಿ ಬ್ಯಾರೆಲ್‌ಗೆ 54 ಡಾಲರ್‌ಗೆ ಇಳಿಕೆಯಾಗಿದ್ದರೂ ಭಾರತದಲ್ಲಿ ತೈಲ ದರ ಇಳಿಕೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಮಲೇಷಿಯಾದಲ್ಲಿ ಸರಕಾರ ಕಳೆದ ವಾರ ಐದನೇ ಬಾರಿಗೆ ತೈಲ ದರ ಇಳಿಕೆಯನ್ನು ಘೋಷಿಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯಾಗಿದೆ. ನಾವು ತೈಲ ದರ ಇಳಿಕೆಗೆ ಬದ್ಧರಾಗಿದ್ದೇವೆ. ಆದರೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಡಿಸೆಂಬರ್ 24ರೊಳಗೆ ತೈಲ ದರ ಇಳಿಕೆ ಪ್ರಕಟಿಸಲು ಸಾಧ್ಯವಿಲ್ಲ ಎಂದು ಸಚಿವ ದೇವ್ರಾ ಸುದ್ದಿಗಾರರಿಗೆ ಹೇಳಿದ್ದಾರೆ.
ಡಿಸೆಂಬರ್ 24 ರೊಳಗಾಗಿ ಸಂಬಂಧಿತ ಅನುದಾನ ಸಮಸ್ಯೆಗಳು ಹಾಗೂ ತೈಲ ದರ ಕಡಿತ ಕುರಿತಂತೆ ಯೋಜನಾಪತ್ರವನ್ನು ಸಿದ್ದಪಡಿಸಿ ಸಚಿವ ಸಂಪುಟ ಸಭೆಗೆ ಕಳುಹಿಸಿಕೊಡಲಾಗುವುದು ಎಂದು ಪೆಟ್ರೋಲಿಯಂ ಕಾರ್ಯದರ್ಶಿ ಆರ್.ಎಸ್.ಪಾಂಡೆ ತಿಳಿಸಿದ್ದಾರೆ. |