ಅಗ್ರ ವಿಮಾನಯಾನ ಸಂಸ್ಥೆಗಳ ಟಿಕೆಟ್‌ಗಳನ್ನು ಕಾಲ್ ಸೆಂಟರ್, ವೆಬ್‌ಸೈಟ್ ಅಥವಾ ನಗರ ಕಚೇರಿಗಳಲ್ಲಿ ಖರೀದಿಸುವಾಗ ವಿಧಿಸಲಾಗುತ್ತಿದ್ದ ನಿರ್ವಹಣಾ ವೆಚ್ಚವನ್ನು ಬುಧವಾರದಿಂದಲೇ ರದ್ದು ಮಾಡಲಾಗಿದೆ.
ಏರ್ ಇಂಡಿಯಾ, ಜೆಟ್ ಏರ್‌ವೇಸ್ ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆಗಳು ಈ ಕ್ರಮಕ್ಕೆ ಮುಂದಾಗಿವೆ. ಇದು 350 ರೂಪಾಯಿಗಳ ದೇಶೀಯ ಯಾನದ ಟಿಕೆಟಿನಿಂದ ಹಿಡಿದು 1,200ರಿಂದ 10,000ದವರೆಗಿನ ಫಸ್ಟ್ ಕ್ಲಾಸ್ ಅಂತಾರಾಷ್ಟ್ರೀಯ ವಿಮಾನಯಾನದ ಟಿಕೆಟ್‌ಗಳಿಗೂ ಅನ್ವಯವಾಗುತ್ತದೆ.
"ನಮ್ಮ ಕಚೇರಿ, ವಿಮಾನನಿಲ್ದಾಣದ ಕೌಂಟರ್ ಮತ್ತು ವೆಬ್‌ಸೈಟ್‌ಗಳಿಂದ ಟಿಕೆಟ್ ಪಡೆದುಕೊಂಡವರಿಗೆ ವಿಧಿಸಲಾಗುತ್ತಿದ್ದ ವ್ಯವಹಾರ ನಿರ್ವಹಣಾ ವೆಚ್ಚವನ್ನು ಇಂದಿನಿಂದಲೇ ಹಿಂತೆಗೆದುಕೊಳ್ಳುತ್ತಿದ್ದೇವೆ" ಎಂದು ಜೆಟ್ ಪ್ರತಿನಿಧಿ ತಿಳಿಸಿದ್ದಾರೆ.
"ವೆಬ್‌ಸೈಟ್, ಕಾಲ್‌ಸೆಂಟರ್ ಅಥವಾ ನಗರದ ಕಚೇರಿಗಳಲ್ಲಿ ನೇರವಾಗಿ ಟಿಕೆಟ್ ಪಡೆದುಕೊಂಡವರಿಗೆ ಯಾವುದೇ ನಿರ್ವಹಣಾ ವೆಚ್ಚಗಳನ್ನು ವಿಧಿಸಲಾಗುವುದಿಲ್ಲ. ಇದು ದೇಶೀಯ ಯಾನದ 350 ರೂಪಾಯಿಗಳ ಟಿಕೆಟಿನಿಂದ ಅಂತಾರಾಷ್ಟ್ರೀಯ ಯಾನದ 10 ಸಾವಿರ ರೂಪಾಯಿಗಳ ಟಿಕೆಟಿನವರೆಗೆ ಲಭ್ಯವಿದೆ" ಎಂದು ಕಿಂಗ್‌ಫಿಶರ್ ಪ್ರತಿನಿಧಿ ಸ್ಪಷ್ಟಪಡಿಸಿದ್ದಾರೆ.
ಏರ್ ಇಂಡಿಯಾ ಕೂಡ ಮಂಗಳವಾರ ತಡರಾತ್ರಿ ಈ ವಿಚಾರವನ್ನು ಘೋಷಿಸಿದೆ. ಯಾವುದೇ ದೇಶೀಯ ಅಥವಾ ಅಂತಾರಾಷ್ಟ್ರೀಯ ವಿಮಾನಯಾನದ ಟಿಕೆಟುಗಳಿಗೆ ಬುಧವಾರದಿಂದಲೇ ಅನ್ವಯವಾಗುವಂತೆ ನಿರ್ವಹಣಾ ವೆಚ್ಚವನ್ನು ವಿಧಿಸಲಾಗುವುದಿಲ್ಲ ಎಂದು ಹೇಳಿದೆ.
ವಿಮಾನಗಳ ಇಂಧನ ಬೆಲೆ ಕಡಿತಗೊಳಿಸಿದ ನಂತರ ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ ಪಟೇಲ್‌ರವರು ಪ್ರಯಾಣದ ಶುಲ್ಕವನ್ನು ಕಡಿಮೆ ಮಾಡುವಂತೆ ವಿಮಾನಯಾನ ಸಂಸ್ಥೆಗಳಿಗೆ ಹೇಳಿದ್ದರು. ಆ ನಂತರ ಈ ಬದಲಾವಣೆಗಳು ಕಂಡುಬಂದಿವೆ.
|