ಶೇ. 3ರ ಬಡ್ಡಿದರದಲ್ಲಿ ಕೃಷಿ ಸಾಲ ನೀಡುವುದನ್ನು ಏಪ್ರಿಲ್ 1ರಿಂದ ಅನ್ವಯವಾಗುವಂತೆ ಜಾರಿ ಮಾಡಲಾಗಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಇದುವರೆಗೆ 2800 ಕೋಟಿ ರೂ. ಸಾಲ ನೀಡಲಾಗಿದ್ದು, ನಾಲ್ಕು ಸಾವಿರ ಕೋಟಿ. ರೂ. ಸಾಲ ನೀಡುವ ನಿರೀಕ್ಷೆ ಇದೆ. ಸಹಕಾರ ಸಪ್ತಾಹ ಸಂದರ್ಭದಲ್ಲಿ ಆಗಸ್ಟ್ ಬದಲಾಗಿ ಏಪ್ರಿಲ್‌ನಿಂದ ಕೃಷಿ ಸಾಲ ಜಾರಿ ಮಾಡುವ ಮನವಿ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಸಾಲ ಹಾಗೂ ಬಡ್ಡಿ ಯೋಜನೆಯಿಂದ ಸಹಕಾರ ಸಂಘಗಳು ಹಾಗೂ ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳು ಚೇತರಿಸಿಕೊಂಡಿದ್ದು, ಕೇಂದ್ರ ಸರಕಾರದ ಸಾಲ ಮನ್ನಾ ಯೋಜನೆಯಿಂದ ರಾಜ್ಯಕ್ಕೆ 200 ಕೋಟಿ ರೂ. ಮಾತ್ರ ಪ್ರಯೋಜನವಾಗಿದೆ ಎಂದು ತಿಳಿಸಿದ ಸಚಿವರು, ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದ 1784 ಕೋಟಿ ರೂ. ಮರು ಪಾವತಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ. ಆದರೆ ಇದುವರೆಗೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಸಹಕಾರ ಸಂಘಗಳ ಅವ್ಯವಹಾರದ ಬಗ್ಗೆ ಹಲವು ಮಾಹಿತಿಗಳು ಲಭ್ಯವಾಗಿದ್ದು, ಈ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. |