ನಗರದ ಹಲವೆಡೆ 100ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು ಅಟ್ಟಹಾಸಗೈಯುತ್ತಿರುವ ಭಯೋತ್ಪಾದಕರ ಕೃತ್ಯವನ್ನು ಉದ್ಯಮಿಗಳು ತೀವ್ರವಾಗಿ ಖಂಡಿಸಿದ್ದಾರೆ. ಉಗ್ರರು ಬಾಂಬ್, ಗುಂಡು ಹಾರಾಟ ಮತ್ತು ಗ್ರೆನೇಡ್ ಬಳಸಿ ಎಸಗಿರುವ ದುಷ್ಕೃತ್ಯಗಳಿಂದ ಅಪಾರ ನಷ್ಟ ಸಂಭವಿಸಿದ್ದು, ಉದ್ಯಮವೂ ಅಲ್ಲೋಲ ಕಲ್ಲೋಲವಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗಾಗಿ ಕಾನೂನಿನ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.
ಮಹೀಂದ್ರಾ & ಮಹೀಂದ್ರಾ ಕಂಪನಿಯ ಉಪಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಆನಂದ್ ಮಹೀಂದ್ರಾ ಸಂದರ್ಶನವೊಂದರಲ್ಲಿ, "ದಾಳಿ ನಡೆದಿರುವುದು ಭಾರತದ ಆರ್ಥಿಕತೆಯ ಕೇಂದ್ರ ಬಿಂದುವಿನಲ್ಲಿ. ಆದರೆ ಭಾರತ ಇದರಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿದೆ. ಇದರ ಪ್ರಭಾವ ಬಹಳ ಮುಂದುವರಿಯದು ಮತ್ತು ಭದ್ರತೆಯ ಬಗ್ಗೆ ಹೊಸ ದಾರಿಗಳನ್ನು ಹುಡುಕುವ ಬಗ್ಗೆ ಭರವಸೆಯಿದೆ" ಎಂದು ತಿಳಿಸಿದ್ದಾರೆ.
ಐಸಿಐಸಿಐ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಕಾರ್ಯನಿರ್ವಾಹಕಾಧಿಕಾರಿ ಕೆ.ವಿ. ಕಾಮತ್, "ಮುಂಬೈ ಮತ್ತೊಮ್ಮೆ ಸ್ತಬ್ದವಾಗಿದೆ ಮತ್ತು ವ್ಯವಹಾರ ಶೀಘ್ರದಲ್ಲೇ ಮರು ಸ್ಥಾಪನೆಯಾಗಲಿದೆ. ಸಹಜವಾಗಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ" ಎಂದವರು ಅಭಿಪ್ರಾಯ ಪಟ್ಟರು.
ಬಜಾಜ್ ಆಟೋ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ರಾಹುಲ್ ಬಜಾಜ್‌ರವರು, "ಉಗ್ರವಾದವನ್ನು ದಮನಿಸಲು ಕಠಿಣ ಕಾನೂನು ಕ್ರಮದ ಅಗತ್ಯವಿದೆ" ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.
ಲಾರ್ಸನ್ & ಟರ್ಬೋ ಕಂಪನಿಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಎ.ಎಮ್. ನಾಯಕ್ ಮಾತನಾಡುತ್ತಾ, "ಭೀತಿಯನ್ನು ನಿರ್ಲಕ್ಷಿಸಲು ನಾವು ಕಾರ್ಖಾನೆಗಳನ್ನು ತೆರೆದಿದ್ದೇವೆ" ಎಂದು ಹೇಳಿದರು.
ಕಿಂಗ್‌ಫಿಶರ್ ಏರ್‌ಲೈನ್ಸ್ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕಾಧಿಕಾರಿ ವಿಜಯ್ ಮಲ್ಯ, "ಬುಡಮೇಲು ಮಾಡುವ ಕೃತ್ಯಗಳು ಮುಂಬೈಯಲ್ಲಿ ಘಟಿಸಿವೆ ಮತ್ತು ಇದಕ್ಕೆ ಕಠಿಣ ಧೋರಣೆಗಳನ್ನು ತಳೆಯಬೇಕಾಗಿದೆ. ಅವರು ಮುಂಬೈ ಮತ್ತು ಅದರ ಹೊರಗೆ ತಮ್ಮ ಆಟಗಳನ್ನು ಆಗಾಗ ನಡೆಸುತ್ತಿರುತ್ತಾರೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸ್ಪೈಸ್‌ಜೆಟ್ ಸಿಇಓ ಸಂಜಯ್ ಅಗರ್ವಾಲ್ ಮಾತನಾಡುತ್ತಾ, "ಮುಂಬೈಯ ಘಟನೆಗಳಿಂದ ವಿಮಾನ ಹಾರಾಟಕ್ಕೆ ಯಾವುದೇ ಪರಿಣಾಮ ಬೀರಿಲ್ಲ" ಎಂದು ತಿಳಿಸಿದ್ದಾರೆ.
ಎಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್ ಪಾರೇಖ್, "ಹೂಡಿಕೆದಾರರ ಭಾವನೆಗಳಿಗೆ ಮುಂಬೈ ಭಯೋತ್ಪಾದನಾ ದಾಳಿ ಘಾಸಿಯನ್ನುಂಟು ಮಾಡಿದೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
|