ರಾಜ್ಯದಲ್ಲಿ ನ್ಯಾನೋ ಕಾರು ಘಟಕ ಸ್ಥಾಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರಕಾರ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಬೆಂಗಳೂರು ನ್ಯಾನೋ ಮೇಳವನ್ನು ಆಯೋಜಿಸಿದೆ.
ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ರಾಜ್ಯ ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳು ಆಯೋಜಿಸಿರುವ ಈ ಮೇಳವು ಡಿ.13ರಂದು ನಡೆಯಲಿದೆ.
ಎರಡನೇ ಬಾರಿಗೆ ನಡೆಯುತ್ತಿರುವ ಬೆಂಗಳೂರು ನ್ಯಾನೊ ಮೇಳವು ನ್ಯಾನೊ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಹೊಸ ಆವಿಷ್ಕಾರ ಮತ್ತು ಸಂಶೋಧನಾ ಯೋಜನೆಗಳ ಭಾಗಿದಾರರು, ಹೂಡಿಕೆದಾರರು ಹಾಗೂ ವೃತ್ತಿಪರ ಉದ್ಯಮಿಗಳ ನಡುವೆ ಸಹಕಾರ ವೃದ್ಧಿಸುವ ವೇದಿಕೆಯಾಗಲಿದೆ.
ಅಂತೆಯೇ, ಈ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಈಗಷ್ಟೇ ಪ್ರವೇಶಿಸಿರುವ ಭವಿಷ್ಯದ ವಾಣಿಜ್ಯೋದ್ಯಮಿಗಳು ಮತ್ತು ವೃತ್ತಿಪರ ವಾಣಿಜ್ಯೋದ್ಯಮಿಗಳ ನಡುವೆ ಮುಖಾಮುಖಿ ಚರ್ಚೆ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. |