ನ್ಯಾನೋ ಗ್ರಾಹಕರಿಗೆ ಸಂತಸದ ಸುದ್ದಿ. ನ್ಯಾನೋ ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ. ಆದರೆ ಗುಜರಾತ್‌ನಲ್ಲಿರುವ ಘಟಕ ಕಾರ್ಯಾರಂಭವಾಗದ ಹಿನ್ನೆಲೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಭಾರೀ ಸಂಖ್ಯೆಯಲ್ಲಿ ಕಾರುಗಳ ತಯಾರಿಕೆ ಸಾಧ್ಯವಾಗದೇ, ಅಲ್ಪ ಸಂಖ್ಯೆಯಲ್ಲಷ್ಟೇ ಕಾರುಗಳನ್ನು ಮಾರುಕಟ್ಟೆಗೆ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿದೆ. ನಮ್ಮದೇ ಘಟಕಗಳ ಮೂಲಕ ಮಧ್ಯಂತರ ವ್ಯವಸ್ಥೆಯನ್ನು ಕಲ್ಪಿಸಿ, ಸಾಧ್ಯವಾದಷ್ಟು ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ ಕೆಲ ಗ್ರಾಹಕರಾದರೂ ನ್ಯಾನೋದ ಅನುಭವ ಪಡೆಯಲಿ ಎಂದು ಟಾಟಾ ಮೋಟಾರ್ಸ್ ವ್ಯವಸ್ಥಾಪಕ ರವಿಕಾಂತ್ ಹೇಳಿದ್ದಾರೆ. ಗುಜರಾತ್‌ನ ಚರೋಡಿಯ ಸನಂದ್‌ನಲ್ಲಿರುವ ಘಟಕದಿಂದ ಕಾರುಗಳ ತಯಾರಿಕೆಯಾಗಲು ಒಂದು ವರ್ಷ ಅವಧಿಯ ಅಗತ್ಯವಿದೆ. ಈಗಾಗಲೇ ನ್ಯಾನೋ ವಿಳಂಬವಾಗಿದ್ದರಿಂದ ಇತರ ಘಟಕಗಳಲ್ಲಿ ನ್ಯಾನೋ ಸಿದ್ದಪಡಿಸಲಾಗುತ್ತಿದೆ ಎಂದು ತಿಳಿಸಿದರು. ಉತ್ತರಾಖಂಡ್‌ನ ಪಂಥನಗರದಲ್ಲಿರುವ ಘಟಕದಿಂದ ನ್ಯಾನೋ ಕಾರುಗಳನ್ನು ತಯಾರಿಸಲಾಗುತ್ತಿದ್ದು, ಬಹುನಿರೀಕ್ಷಿತ ನ್ಯಾನೋ ಕಾರು ಮುಂದಿನ ವರ್ಷದ ಜನವರಿಯಿಂದ ಮಾರ್ಚ್ ತಿಂಗಳ ಅವಧಿಯೊಳಗೆ ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಿಂದ ಗುಜರಾತ್‌ನ ಸನಂದ್‌ವರೆಗೆ ಘಟಕ ಸ್ಥಳಾಂತರ ಸೇರಿದಂತೆ ಹಲವಾರು ಅಡೆತಡೆಗಳನ್ನು ಎದುರಾಗಿದ್ದರಿಂದ ನ್ಯಾನೋ ಯೋಜನೆ ವಿಳಂಬಕ್ಕೆ ಕಾರಣವಾಗಿದೆ ಎಂದು ಟಾಟಾಮೋಟಾರ್ಸ್ ಮೂಲಗಳು ತಿಳಿಸಿವೆ. ಗುಜರಾತ್‌ನ ಸನಂದ್‌ನಲ್ಲಿರುವ ಘಟಕದಿಂದ ಒಂದು ವರ್ಷದ ನಂತರ ಬೃಹತ್ ಪ್ರಮಾಣದಲ್ಲಿ ನ್ಯಾನೋ ಕಾರುಗಳು ಹೊರಬರಲಿವೆ. ಪ್ರಸ್ತುತ ಹೊರಬಂದಿರುವ ಕಾರುಗಳ ಸಂಖ್ಯೆಯನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ವ್ಯವಸ್ಥಾಪಕ ನಿರ್ದೇಶಕ ರವಿಕಾಂತ್ ತಿಳಿಸಿದ್ದಾರೆ. |