ಬ್ಲ್ಯಾಂಕ್ ಕರೆಗಳು, ಮಾತನಾಡಿದರೆ ಅಸ್ಪಷ್ಟ ಧ್ವನಿ, ನಿಧಾನಗತಿಯ ಇಂಟರ್ನೆಟ್ ಸಂಪರ್ಕ ಇವುಗಳನ್ನೆಲ್ಲಾ ಅನುಭವಿಸುತ್ತಿದ್ದೀರೇ? ಇದಕ್ಕೆ ಕಾರಣ, ಸಾಗರದೊಳಗಿನ ನಾಲ್ಕು ಕೇಬಲ್‌ಗಳು ತುಂಡಾಗಿರುವುದು. ಇದು ಭಾರತ ಮಾತ್ರವಲ್ಲದೆ ಇತರ 13 ರಾಷ್ಟ್ರಗಳನ್ನೂ ಬಾಧಿಸುತ್ತಿದೆ.
ಯೂರೋಪ್ ಮತ್ತು ಮಧ್ಯಪೂರ್ವ ರಾಷ್ಟ್ರಗಳ ನಡುವೆ ಶೇ.90ರಷ್ಟು ಮಾಹಿತಿ ಸಂವಹನದ ಪ್ರಧಾನ ಬಿಂದುವಾಗಿದ್ದ ಈಜಿಪ್ಟ್ ಮತ್ತು ಇಟಲಿ ನಡುವೆ ಇರುವ ಕೇಬಲ್‌ಗಳು ತುಂಡರಿಸಲ್ಪಟ್ಟಿದ್ದು, ಇಂಟರ್ನೆಟ್ ಗ್ರಾಹಕರು ತೀವ್ರ ತೊಂದರೆಗೂ ಒಳಗಾಗಿದ್ದಾರೆ.
ಈ ತಿಂಗಳ ಕೊನೆಯವರೆಗೂ ಈ ಸಮಸ್ಯೆ ಮುಂದುವರಿಯುವ ಸಾಧ್ಯತೆಗಳಿವೆ. ಮೆಡಿಟರೇನಿಯನ್ ಸಮುದ್ರದಲ್ಲಿರುವ ಎರಡು ನಿರ್ವಹಣಾ ನೌಕೆಗಳಲ್ಲೊಂದಾದ ರೇಮಂಡ್ ಕ್ರೋಜ್ ಎಂಬ ಫ್ರಾನ್ಸ್‌ನ ಟೆಲಿಕಾಂ ಕೇಬಲ್ ಹಡಗು ಇದರ ದುರಸ್ತಿಗಾಗಿ ಈಗಾಗಲೇ ಸ್ಥಳಕ್ಕೆ ತೆರಳಿದೆ.
ಫ್ರಾನ್ಸ್ ಟೆಲಿಕಾಂ ವರದಿಯ ಪ್ರಕಾರ, ಮಾಲ್ದೀವ್ಸ್‌ನಲ್ಲಿ ಶೇ.100ರಷ್ಟು ದೂರಸಂಪರ್ಕ ಅಸ್ತವ್ಯಸ್ತಗೊಂಡಿದೆ. ಭಾರತದಲ್ಲಿ ಇದರ ಪ್ರಮಾಣ ಶೇ.82. ಸೌದಿ ಅರೇಬಿಯಾ, ಈಜಿಪ್ಟ್, ಯುಎಇ, ಪಾಕಿಸ್ತಾನ, ಮಲೇಷ್ಯಾ, ಜಾಂಬಿಯಾ, ಖತಾರ್ ಮುಂತಾದ ರಾಷ್ಟ್ರಗಳಲ್ಲಿಯೂ ಕಳೆದ ವಾರಾಂತ್ಯದಲ್ಲಿ ಈ ತೊಂದರೆ ಕಾಣಿಸಿಕೊಂಡಿದ್ದು, ಅದು ವಾರದ ಆರಂಭವಾದ ಸೋಮವಾರ ತೀವ್ರವಾಗಿ ಬಾಧಿಸಿತು ಎಂದು ಮೂಲಗಳು ತಿಳಿಸಿವೆ.
ಹಡಗಿನ ಆಂಕರ್ ತಾಗಿದ್ದೇ ಕೇಬಲ್‌ಗಳು ತುಂಡಾಗಲು ಕಾರಣ ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ. ಭಾರತಿ ಏರ್‌ಟೆಲ್ ಮತ್ತು ರಿಲಯನ್ಸ್ ಗ್ಲೋಬಲ್‌ಕಾಂ ಮಾಲೀಕತ್ವದಲ್ಲಿ ಎರಡು ಕೇಬಲ್‌ಗಳಿವೆ. ಹೀಗಾಗಿ ಅವರೆಡು ಟೆಲಿಕಾಂ ಸೇವಾಪೂರೈಕೆದಾರ ಸಂಸ್ಥೆಗಳ ಗ್ರಾಹಕರು ಹೆಚ್ಚು ಬಾಧೆಗೊಳಗಾಗಿದ್ದಾರೆ. ಬಿಪಿಒ ಮತ್ತು ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಇದರ ಬಿಸಿ ತಟ್ಟುತ್ತಿದೆ. ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಈ ಸಮಸ್ಯೆ ಕಾಣಿಸಿಕೊಂಡಿರುವುದು ಅವುಗಳ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. |