ಮನಬಂದಂತೆ ದರ ಏರಿಸುತ್ತಾ, ಮಧ್ಯಮ ವರ್ಗದ ಮಂದಿ ತಲೆ ಮೇಲೊಂದು ಸೂರು ಹೊಂದುವ ಆಸೆ ಭಗ್ನವಾಗುವಂತೆ ಮಾಡಿದ್ದ ಸ್ಥಿರಾಸ್ಥಿ ಕ್ಷೇತ್ರದ ಮಂದಿ, ಜಾಗತಿಕ ಬಿಕ್ಕಟ್ಟು ಭಾರತೀಯ ಗ್ರಾಹಕರನ್ನೂ ಬಾಧಿಸುತ್ತಿರುವುದನ್ನು ಮನಗಂಡು ಮತ್ತು ಬೇಡಿಕೆ ಕುಸಿತದ ಲಕ್ಷಣಗಳ ಆತಂಕದಿಂದಾಗಿ, ಮಧ್ಯಮ ಶ್ರೇಣಿಯ ವಸತಿ ಬಗ್ಗೆ ಗಮನ ಹರಿಸಲಿದ್ದಾರೆ.
ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ (ಫಿಕ್ಕಿ) ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಯಲಾಗಿದೆ.
ಭಾರತೀಯ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಜಾಗತಿಕ ಬಿಕ್ಕಟ್ಟಿನ ಪರಿಣಾಮ ಎಂಬ ಕುರಿತು ನಡೆಸಲಾದ ಸಮೀಕ್ಷೆಯ ಪ್ರಕಾರ, ಕಾರ್ಪೋರೇಟ್ ಸಂಸ್ಥೆಗಳು ತಮ್ಮ ವಿಸ್ತರಣಾ ಯೋಜನೆಯನ್ನು ಮುಂದೂಡುತ್ತಿವೆ. ಇದಕ್ಕೆ ಕಾರಣ, ಬೆಲೆಗಳು ಮತ್ತಷ್ಟು ಇಳಿಯಲಿ ಎಂಬ ನಿರೀಕ್ಷೆ. ಪ್ರಸ್ತುತವಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಸಮಯ ಮತ್ತು ವೆಚ್ಚದ ಪ್ರಭಾವ ಬಹಳವಾಗಿದೆ. ಹೊಸ ಯೋಜನೆಗಳನ್ನು ವಿಳಂಬ ಮಾಡಲಾಗುತ್ತಿದೆ. ಇದು ಮುಂದಿನ ಒಂದು ವರ್ಷದಲ್ಲಿ ಬೆಲೆ ಇಳಿಕೆಗೆ ಕಾರಣವಾಗಲಿದ್ದು, ಮಾರುಕಟ್ಟೆಯು ಅಂತಿಮವಾಗಿ ಬಳಕೆದಾರರ ಪರವಾಗಿ ತಿರುಗಲಿದೆ.
ಸಾಮಾನ್ಯ ಜನರಿಗೆ ವಾಸಯೋಗ್ಯವಾದ ಮನೆಯನ್ನು ಕೈಗೆಟಕುವ ದರದಲ್ಲಿ ಮತ್ತು ಮಧ್ಯಮ-ಶ್ರೇಣಿಯಲ್ಲಿ ಒದಗಿಸಿಕೊಡುವ ಅನಿವಾರ್ಯತೆಯು ಸ್ಥಿರಾಸ್ತಿ ಮಾರುಕಟ್ಟೆದಾರರಿಗೆ ಅರಿವಾಗಿದೆ. ಪ್ರಸಕ್ತ ಬಿಕ್ಕಟ್ಟಿನಿಂದ ಪಾರಾಗಬೇಕಿದ್ದರೆ ಇದೊಂದೇ ದಾರಿ ಎಂಬುದು ಅವರಿಗೆ ಮನವರಿಕೆಯಾಗಿದೆ. ಹೆಚ್ಚಿನ ಡೆವಲಪರ್‌ಗಳು ಇದುವರೆಗೆ ಅಗ್ರ-ಶ್ರೇಣಿಯ (ಐಷಾರಾಮಿ) ಮನೆಗಳ ಮೇಲೆಯೇ ಹೆಚ್ಚು ಗಮನ ಹರಿಸುತ್ತಿದ್ದರು. ಇದೀಗ ಮಧ್ಯಮ-ಶ್ರೇಣಿಯ ಮತ್ತು ಕಡಿಮೆ ಬೆಲೆಯ ಗುಣಮಟ್ಟದ ಮನೆ ನಿರ್ಮಿಸಿಕೊಡುವುದರತ್ತ ಅವರು ಎಚ್ಚೆತ್ತುಕೊಂಡಿದ್ದಾರೆ ಎಂಬುದು ಈ ಸಮೀಕ್ಷೆಯಿಂದ ತಿಳಿದುಬಂದ ಅಂಶಗಳಲ್ಲೊಂದು.
ರಿಯಲ್ ಎಸ್ಟೇಟ್ ಕುಳಗಳು ದರ ಕಡಿಮೆ ಮಾಡುತ್ತಿರುವುದು ಹಾಗೂ ಬ್ಯಾಂಕುಗಳು ಕೂಡ ಗೃಹ ಸಾಲದ ಬಡ್ಡಿದರವನ್ನು ಗಣನೀಯವಾಗಿ ಕಡಿಮೆ ಮಾಡುತ್ತಿರುವುದು ಮಧ್ಯಮ ವರ್ಗಕ್ಕೆ ಕನಸಿನ ಮನೆ ಕೊಳ್ಳಲು ಪೂರಕ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ ಮತ್ತು ಒಂದಷ್ಟು ಕಾದು, ಅಳೆದು ತೂಗಿ, ಮನೆ ಕಟ್ಟಿಸಿಕೊಳ್ಳಲು ಇದು ಸಕಾಲ ಎಂಬುದು ಹಣಕಾಸು ತಜ್ಞರ ಅಭಿಮತ. |