ಜಾಗತಿಕ ಹಣಕಾಸು ಹಿಂಜರಿತದ ಬಿಸಿಯಿಂದಾಗಿ ವೆಚ್ಚ ಉಳಿತಾಯಕ್ಕೆ ಮುಂದಾಗಿರುವ ದಕ್ಷಿಣ ಕೊರಿಯಾದ ಹುಂಡೈ ಮೋಟಾರ್ ಕಂಪನಿ, ತನ್ನ ಸೊನಾಟಾ ಮತ್ತು ಗ್ರಾಂಡಿಯರ್ ಸೇಡಾನ್ ಮಾದರಿಯ ಕಾರು ಉತ್ಪಾದನಾ ಘಟಕಗಳಲ್ಲಿ ದುಡಿಮೆಯ ಅವಧಿಯನ್ನು ಕಡಿತಗೊಳಿಸುವುದೂ ಸೇರಿದಂತೆ ಹಲವಾರು ಕ್ರಮಗಳನ್ನು ಘೋಷಿಸಿದೆ.
ವಿಶ್ವದ ನಂ.5 ಆಟೋ ತಯಾರಿಕಾ ಸಂಸ್ಥೆ ಎಂಬ ಹೆಗ್ಗಳಿಕೆಯುಳ್ಳ ಕಿಯಾ ಮೋಟಾರ್ಸ್ ಕಾರ್ಪ್ ಮತ್ತು ಹುಂಡೈ ಮೋಟಾರ್ಸ್ ಜೋಡಿ ಕಂಪನಿಯು ಸೋಮವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳಿಗೆ ಸಂಬಂಧಿಸಿ ಕಂಪನಿಯು ಕ್ರಿಯಾತ್ಮಕವಾಗಿ ಪ್ರತಿಸ್ಪಂದಿಸುತ್ತಿದೆ ಎಂದಿವೆ.
ಹುಂಡೈ ಮತ್ತು ಕಿಯಾ ಕಂಪನಿಗಳು ಒಟ್ಟಾಗಿ ಹಿನ್ನಡೆ ಅನುಭವಿಸುತ್ತಿದ್ದು, ಕಳೆದ ವರ್ಷದ 4.8 ದಶಲಕ್ಷ ಇದ್ದ ವಾಹನಗಳ ಮಾರಾಟದ ಅಂದಾಜನ್ನು ಈ ವರ್ಷ 4.2 ದಶಲಕ್ಷಕ್ಕೆ ಇಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಿಶ್ವಾದ್ಯಂತ ಕುಸಿತ ಕಾಣುತ್ತಿರುವ ಬೇಡಿಕೆ ಮತ್ತು ಆಟೋ ಫೈನಾನ್ಸ್‌ನ ಕಠಿಣ ನಿಯಮಾವಳಿಗಳಿಂದಾಗಿ ವಾಹನೋದ್ಯಮ ಕ್ಷೇತ್ರಕ್ಕೆ ಹೊಡೆತ ಬಿದ್ದಿದೆ. ಅಮೆರಿಕದಲ್ಲಿ ನಷ್ಟದಲ್ಲಿರುವ ಕಾರು ತಯಾರಿಕಾ ಸಂಸ್ಥೆಗಳ ಪುನಶ್ಚೇತನಕ್ಕೆ ಸರಕಾರವು 17.4 ಶತಕೋಟಿ ಡಾಲರ್ ಪ್ಯಾಕೇಜನ್ನು ಘೋಷಿಸಿತ್ತು. |