ತನಿಖೆ ಎದುರಿಸುತ್ತಿರುವ ಸತ್ಯಂ ಕಂಪ್ಯೂಟರ್ಸ್ ಇನ್ನು 8 ವರ್ಷಗಳ ಕಾಲ ತನ್ನೊಂದಿಗೆ ವ್ಯವಹರಿಸುವಂತಿಲ್ಲ ಎಂದು ವಿಶ್ವ ಬ್ಯಾಂಕ್ ನಿರ್ಬಂಧ ವಿಧಿಸಿದೆ.
'ಈ ಕುರಿತು ಅಮೆರಿಕ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಸತ್ಯ' ಎಂಬುದನ್ನು ವಿಶ್ವಬ್ಯಾಂಕ್‌ನ ಭಾರತೀಯ ವಕ್ತಾರರು ಖಚಿತಪಡಿಸಿದ್ದಾರೆ. ಸತ್ಯಂ ಚೇರ್ಮನ್ ರಾಮಲಿಂಗ ರಾಜು ಕುಟುಂಬದ ಉಸ್ತುವಾರಿಯಲ್ಲಿದ್ದ ಎರಡು ಕಂಪನಿಗಳನ್ನು ಒಳಗೊಂಡ ಖರೀದಿ ಒಪ್ಪಂದವೊಂದು ವಿಫಲವಾಗಿರುವ ಕುರಿತು ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸತ್ಯಂ ತೀವ್ರ ಹಿನ್ನಡೆ ಅನುಭವಿಸುತ್ತಿದೆ.
ಇದು 2004ರ ಬಳಿಕ ಯಾವುದೇ ಕಂಪನಿ ವಿರುದ್ಧ ವಿಶ್ವ ಹಣಕಾಸು ಬ್ಯಾಂಕ್ ಹೇರಿದ ಅತ್ಯಂತ ಕಠಿಣತಮ ನಿರ್ಬಂಧವಾಗಿದೆ. ಮಯ್ತಾಸ್ ಇನ್ಫ್ರಾ ಮತ್ತು ಮೇಯ್ತಾಸ್ ಪ್ರಾಪರ್ಟೀಸ್ ಎಂಬ ರಾಜು ಅವರ ಕುಟುಂಬ ಪ್ರಾಯೋಜಿತ ಎರಡು ಸಂಸ್ಥೆಗಳನ್ನು ಖರೀದಿಸಲು 1.6 ಶತಕೋಟಿ ಡಾಲರ್ ಒಪ್ಪಂದ ನಡೆದಿದೆ ಎಂದು ಸತ್ಯಂ ಘೋಷಿಸಿತ್ತು. ಶೇರುದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಲವೇ ಗಂಟೆಗಳಲ್ಲಿ ಅದು ಈ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿದಿತ್ತು.
ಈ ವಿಷಯದ ಬಗ್ಗೆ ತನಿಖೆ ನಡೆಸುವುದಾಗಿ ಸೆಬಿ ಮತ್ತು ಭಾರತ ಸರಕಾರ ಹೇಳಿತು. ಇದೀಗ ಈ ಸಮಸ್ಯೆಗಳ ಹಿನ್ನೆಲೆಯಲ್ಲಿ ವಿಶ್ವ ಬ್ಯಾಂಕು ಸತ್ಯಂಗೆ 8 ವರ್ಷಗಳ ನಿರ್ಬಂಧ ಹೇರಿದೆ. ಈ ನಿಷೇಧವು ಸೆಪ್ಟೆಂಬರ್ ತಿಂಗಳಿಂದಲೇ ಜಾರಿಯಾಗಿದೆ ಎಂದು ಅಮೆರಿಕದ ಫಾಕ್ಸ್ ನ್ಯೂಸ್ ವರದಿ ಮಾಡಿದೆ. |