ಕಳೆದ ನಾಲ್ಕು ತಿಂಗಳುಗಳ ಹಿಂದೆ ಶೇ.12.91ರಷ್ಟಿದ್ದ ಹಣದುಬ್ಬರ ದರ, ಉತ್ಪಾದಕ ವಸ್ತುಗಳು, ಅಹಾರೋತ್ಪನ್ನ ವಸ್ತುಗಳ ದರಗಳಲ್ಲಿ ಇಳಿಕೆಯಾಗಿದ್ದರಿಂದ ಡಿಸೆಂಬರ್ 13ಕ್ಕೆ ವಾರಂತ್ಯಗೊಂಡಂತೆ ಶೇ.6.61ಕ್ಕೆ ತಲುಪಿದೆ.ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ಮತ್ತು ರಿವರ್ಸ್ ರೆಪೊ ದರಗಳಲ್ಲಿ ಕಡಿತಗೊಳಿಸಿರುವುದು ಹಾಗೂ ಇಂಧನ ದರಗಳಲ್ಲಿ ಇಳಿಕೆಯಿಂದಾಗಿ ಸಗಟು ಸೂಚ್ಯಂಕ ದರ ನಿರಂತರ ಏಳನೇ ವಾರದಲ್ಲಿ ಕುಸಿತದತ್ತ ಸಾಗಿ ಒಂಬತ್ತು ವಾರಗಳ ಇಳಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ.ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಶೇ.3.84ರಷ್ಟಿದ್ದ ಹಣದುಬ್ಬರ ದರ, ಪ್ರಸಕ್ತ ವರ್ಷದಲ್ಲಿ ಡಿಸೆಂಬರ್ 13ಕ್ಕೆ ವಾರಂತ್ಯಗೊಂಡಂತೆ ಶೇ.6.61ರಷ್ಟಾಗಿದೆ ಕೊಬ್ಬರಿ ಎಣ್ಣೆ, ಸಕ್ಕರೆ, ಸಿಮೆಂಟ್ ಮತ್ತು ಜವಳಿ ಕ್ಷೇತ್ರದ ವಸ್ತುಗಳಾದ ಕಾಟನ್ ಮತ್ತು ಯಾರ್ನ್‌ಗಳ ದರಗಳಲ್ಲಿ ಇಳಿಕೆಯಾಗಿದ್ದರಿಂದ ಉತ್ಪಾದಕ ವಸ್ತುಗಳ ದರಗಳು ಕೂಡಾ ಇಳಿಕೆಯಾಗಿವೆ.ಸಿಮೆಂಟ್ ದರದಲ್ಲಿ ಶೇ.1.5ರಷ್ಟು ಇಳಿಕೆಯಾಗಿದ್ದು, ಪೈಪುಗಳು ಮತ್ತು ಟ್ಯೂಬ್‌ಗಳು ಶೇ.0.5 ರಷ್ಟು,ಸ್ಟೀಲ್ ವೈರ್,ಝಿಂಕ್ ಮತ್ತು ಸ್ಟೀಲ್ ದರಗಳಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹಣ್ಣು, ತರಕಾರಿ, ಚಹಾ, ದ್ವಿದಳಧಾನ್ಯ,ಮಸಾಲೆ ಪದಾರ್ಥಗಳು, ಸಮುದ್ರ ಮೀನು, ಗೋಧಿ ದರಗಳಲ್ಲಿ ವಾರಂತ್ಯಗೊಂಡಂತೆ ಇಳಿಕೆಯಾಗಿವೆ.ಕಚ್ಚಾ ತೈಲ ದರಗಳಲ್ಲಿ ಇಳಿಕೆಯಾಗಿದ್ದರೂ ಇಂಧನ ಸೂಚ್ಯಂಕದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಅಮುದು ಮಾಡಿಕೊಂಡ ಖಾದ್ಯ ತೈಲ ದರದಲ್ಲಿ ಶೇ.4ರಷ್ಟು ಇಳಿಕೆಯಾಗಿದೆ. |