ಮುಟ್ಟಿದ್ದೆಲ್ಲಾ ಚಿನ್ನ ಎಂಬ ಗಾದೆಯಂತೆ, ದೇಶದ ಚಿನ್ನದ ಮಾರುಕಟ್ಟೆಗೆ ಶನಿವಾರ ಶುಕ್ರದೆಸೆ. ಚಿನ್ನ ಕಳೆದ ಎರಡೂವರೆ ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿತು. ಮುಂಬೈ ಚಿನಿವಾರ ಪೇಟೆಯಲ್ಲಿ ಶನಿವಾರ 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ.13,440ಕ್ಕೆ ಮುಟ್ಟಿತು. ಅಲ್ಲದೇ ಬೆಳ್ಳಿಗೂ ಬೇಡಿಕೆ ಹೆಚ್ಚಿ ಕಿಲೋಗೆ 17,610ರೂಪಾಯಿ ಆಯಿತು.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿದ್ದರಿಂದ ಭಾರತದ ಆಭರಣ ವರ್ತಕರು, ಹೂಡಿಕೆದಾರರು ಖರೀದಿಗೆ ಮುಗಿಬಿದ್ದರು. ಅದೇ ವೇಳೆ ಷೇರು ಪೇಟೆಯೂ ಇಳಿಕೆಯಾಗುವತ್ತಲೇ ಗಮನ ಕೇಂದ್ರೀಕರಿಸಿದ್ದರಿಂದ ಹೂಡಿಕೆದಾರರಿಗೆ ಚಿನ್ನವೇ ಆಪ್ತವಾಯಿತು.
ಪರಿಣಾಮ ಮುಂಬೈ ಸೇರಿದಂತೆ ದೇಶದ ಚಿನಿವಾರ ಪೇಟೆಯಲ್ಲಿ 10ಗ್ರಾಂ ಸ್ಟಾಂಡರ್ಡ್ ಚಿನ್ನ ಒಂದೇ ದಿನದಲ್ಲಿ 290ರೂ. ಬೆಲೆ ಹೆಚ್ಚಿಸಿಕೊಂಡಿತು. ಅಪರಂಜಿ ಚಿನ್ನ 13,500 ರೂಪಾಯಿಗೆ ಏರಿತು. ಬೆಳ್ಳಿಯೂ ಕಿಲೋಗೆ ರೂ.235 ಹೆಚ್ಚಿನ ಬೆಲೆಗೆ ಹೆಚ್ಚಳಗೊಂಡಿತ್ತು. |