ಪ್ರಸಕ್ತ ವರ್ಷದ ಅಕ್ಟೋಬರ್ ತಿಂಗಳಿಗೆ ಹೋಲಿಸಿದಲ್ಲಿ, ನವೆಂಬರ್ ತಿಂಗಳ ಅವಧಿಯಲ್ಲಿ ಮೊಬೈಲ್ ಫೋನ್ ಸಂಪರ್ಕ ಪಡೆದವರ ಸಂಖ್ಯೆಯಲ್ಲಿ ಶೇ.1.06ರಷ್ಟು ಇಳಿಕೆಯಾಗಿದೆ ಎಂದು ಟೆಲಿಕಾಂ ಮೂಲಗಳು ತಿಳಿಸಿವೆ. ಅಕ್ಟೋಬರ್ ತಿಂಗಳಿನಲ್ಲಿ 10.28 ಮಿಲಿಯನ್ ಗ್ರಾಹಕರು ಸ್ಥಿರ ಮತ್ತು ಮೊಬೈಲ್ ಫೋನ್ ಸಂಪರ್ಕ ಪಡೆದಿದ್ದು, ನವೆಂಬರ್ ತಿಂಗಳಿನಲ್ಲಿ 10.18 ಮಿಲಿಯನ್ ಮೊಬೈಲ್ ಫೋನ್ ಗ್ರಾಹಕರು ಸಂಪರ್ಕ ಪಡೆದಿದ್ದಾರೆ ಎಂದು ಟೆಲಿಕಾಂ ರೆಗ್ಯೂಲೆಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯಿ) ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು ಮೊಬೈಲ್ ಗ್ರಾಹಕರ ಸಂಖ್ಯೆ 363.95 ಮಿನಿಯನ್‌ಗಳಾಗಿದ್ದು, ನವೆಂಬರ್ ತಿಂಗಳಾಂತ್ಯಕ್ಕೆ 374.13 ಮಿಲಿಯನ್‌ಗೆ ತಲುಪಿದೆ. ದೇಶದ ಒಟ್ಟು ಜಿಎಸ್‌ಎಂ ಹಾಗೂ ಸಿಡಿಎಂಎ ಮತ್ತು ಸ್ಥಿರ ವೈರ್‌ಲೆಸ್ ಗ್ರಾಹಕರ ಸಂಖ್ಯೆ ನವೆಂಬರ್ ತಿಂಗಳಾಂತ್ಯಕ್ಕೆ 336.08 ಮಿಲಿಯನ್‌ಗಳಾಗಿದೆ ಎಂದು ಟ್ರಾಯ್ ತಿಳಿಸಿದೆ. |