ಸತ್ಯಂ ಕಂಪ್ಯೂಟರ್ಸ್ ಮುಖ್ಯಸ್ಥ ರಾಮಲಿಂಗಾ ರಾಜು ಸಂಚಾಲಿತ ಎರಡು ಕಂಪೆನಿಗಳ ಖರೀದಿ ಕುರಿತಂತೆ ಭುಗಿಲೆದ್ದ ವಿವಾದದಿಂದಾಗಿ, ಡಿಸೆಂಬರ್ 16 ರಂದು ನಡೆದ ಅಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ವಿವಾದ ಸೃಷ್ಟಿಸಿದ್ದ ಎಂ.ರಾಮ್‌ಮೋಹನ್‌ರಾವ್ ಸೇರಿದಂತೆ ಮೂವರು ನಿರ್ದೇಶಕರು ರಾಜೀನಾಮೆ ನೀಡಿದ್ದಾರೆ.
ಎಂ.ರಾಮ್‌ಮೋಹನ್‌ರಾವ್ ತಕ್ಷಣದಿಂದ ತಮ್ಮ ರಾಜೀನಾಮೆಯನ್ನು ಸ್ವೀಕರಿಸುವಂತೆ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಸತ್ಯಂ ವಕ್ತಾರರು ರಾಜೀನಾಮೆ ನೀಡದ ಕುರಿತಂತೆ ಖಚಿತ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.
ನ್ಯೂಯಾರ್ಕ್ ಶೇರುಪೇಟೆಯಲ್ಲಿ ನೊಂದಾಯಿತ ಕಂಪೆನಿಯಾದ ಸತ್ಯಂ ಕಂಪ್ಯೂಟರ್ಸ್‌ನ ನಾನ್- ಎಕ್ಸಿಕ್ಯೂಟಿವ್ ನಿರ್ದೆಶಕರಾದ ಕೃಷ್ಣ ಪಲೇಪು ಮತ್ತು ವಿನೋದ್ ಕೆ.ಧಾಮ್ ಹಾಗೂ ಮಂಡಳಿಯ ಸ್ವತಂತ್ರ ನಿರ್ದೇಶಕರೊಬ್ಬರು ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಮೆಟಾಸ್ ಪ್ರಾಪರ್ಟಿಸ್ ಹಾಗೂ ಮೆಟಾಸ್ ಕಂಪೆನಿಗಳ ಸ್ವಾಧೀನ ಕುರಿತಂತೆ ವಿವಾದ ಎದುರಾದ ಹಿನ್ನೆಲೆಯಲ್ಲಿ ಅಡಳಿತ ಮಂಡಳಿಯ ಹಿರಿಯ ನಿರ್ದೇಶಕರಾಗಿದ್ದ ಮಂಗಲಂ ಶ್ರೀನಿವಾಸ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು.
ಶೇರುಬೆಲೆಗಳನ್ನು ಹೆಚ್ಚಿಸಲು ಹಾಗೂ ಅಡಳಿತ ಮಂಡಳಿಯನ್ನು ಪರಿಷ್ಕರಿಸಲು ಕಳೆದ ಸೋಮವಾರದಂದು ಕರೆಯಲಾಗಿದ್ದ ಸತ್ಯಂ ಅಡಳಿತ ಮಂಡಳಿಯ ನಿರ್ದೇಶಕರ ಸಭೆಯನ್ನು ಜನೆವರಿ 10ಕ್ಕೆ ಮುಂದೂಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. |