ದೇಶದ ಮೂರನೇ ಬೃಹತ್ ಟೆಲಿಕಾಂ ಸಂಸ್ಥೆಯಾದ ಐಡಿಯಾ ಸೆಲ್ಯೂಲರ್, ಕರ್ನಾಟಕದಲ್ಲಿ 300 ಕೋಟಿ ರೂ. ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಸಂಪರ್ಕ ವ್ಯವಸ್ಥೆ ಬಲಪಡಿಸಲು ಮುಂದಿನ 15 ತಿಂಗಳುಗಳಲ್ಲಿ 300 ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂದು ಐಡಿಯಾ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಆಗಾ ಸುದ್ದಿಗಾರರಿಗೆ ತಿಳಿಸಿದ್ದಾರೆ.ಐಡಿಯಾ ಸೆಲ್ಯೂಲರ್ ಕಂಪೆನಿ, ಇತ್ತೀಚೆಗೆ ಕರ್ನಾಟಕ ಮತ್ತು ಪಂಜಾಬ್‌ನಲ್ಲಿದ್ದ ಸ್ಪೈಸ್ ಕಂಪೆನಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಪ್ರಸ್ತುತವಿರುವ ಸ್ಪೈಸ್‌ನ 14 ಲಕ್ಷ ಗ್ರಾಹಕರು ಐಡಿಯಾಗೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಆದಿತ್ಯ ಬಿರ್ಲಾ ಗ್ರೂಪ್‌ನ ಸಂಸ್ಥೆಯಾದ ಐಡಿಯಾ ಸೆಲ್ಯೂಲರ್ ಪ್ರಸ್ತುತ ಟೆಲಿಕಾಂ ಕ್ಷೇತ್ರದಲ್ಲಿ ಶೇ.40ರಷ್ಟು ಪಾಲನ್ನು ಹೊಂದಿದ್ದು, ಮುಂಬರುವ 2010ರ ವೇಳೆಗೆ ಶೇ.78ಕ್ಕೆ ತಲುಪುವ ಗುರಿಯನ್ನು ಹೊಂದಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಆಗಾ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಸಂಪರ್ಕ ವಿಸ್ತರಣೆಯೊಂದಿಗೆ 36 ಮಿಲಿಯನ್ ಗ್ರಾಹಕರಿಗೆ ಜಿಎಸ್‌ಎಂ ಸೌಲಭ್ಯ ಒದಗಿಸಿದ ಮೂರನೇ ಬೃಹತ್ ಚೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಮುಂದಿನ 12 ತಿಂಗಳುಗಳಲ್ಲಿ ಒರಿಸ್ಸಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಂಪರ್ಕವನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ರಾಜ್ಯದಲ್ಲಿರುವ ಪಟ್ಟಣ ಪ್ರದೇಶಗಳು ಹಾಗೂ ಗ್ರಾಮಗಳಿಗೆ ಸಂಪರ್ಕ ಸೌಲಭ್ಯವನ್ನು ವಿಸ್ತರಿಸಲಾಗುವುದು. ಮುಂಬರುವ 2010ರ ವೇಳೆಗೆ 3410 ಪಟ್ಟಣಗಳು ಹಾಗೂ 11,200 ಗ್ರಾಮೀಣ ಪ್ರದೇಶಗಳಿಗೆ ಸೌಲಭ್ಯವನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದೆ ಎಂದು ಐಡಿಯಾ ಕಂಪೆನಿಯ ನಿರ್ದೇಶಕ ಹಿಮಾಂಶು ಕಪಾನಿಯಾ ತಿಳಿಸಿದ್ದಾರೆ. |