ದೇಶದ ಜನತೆಗೆ ಹೊಸ ವರ್ಷದ ಕೊಡುಗೆಯನ್ನು ನೀಡಲು ಕೇಂದ್ರ ಸರಕಾರ ಎರಡನೇ ಉತ್ತೇಜನ ಪ್ಯಾಕೇಜ್ ಸಿದ್ದಪಡಿಸುತ್ತಿರುವ ಹಿನ್ನೆಲೆಯಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ, ವಿತ್ತ ಸಚಿವಾಲಯದ ಉನ್ನತ ಅಧಿಕಾರಿಗಳು ಪ್ರಧಾನಿಯವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿತ್ತ ಸಚಿವಾಲಯದ ಕಾರ್ಯದರ್ಶಿ ಅರುಣ್ ರಾಮನಾಥನ್, ಸುಶ್ಮಾನಾಥ್ ಮತ್ತು ಕಂದಾಯ ಕಾರ್ಯದರ್ಶಿ ಪಿ.ವಿ. ಭಿಡೆ ಅವರನ್ನು ವಿತ್ತ ಖಾತೆಯನ್ನು ಕೂಡಾ ಹೊಂದಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸಭೆಗೆ ಆಗಮಿಸುವಂತೆ ಆದೇಶ ನೀಡಿದ್ದಾರೆ ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಎರಡನೇ ಉತ್ತೇಜನ ಪ್ಯಾಕೇಜ್ ಸೇರಿದಂತೆ ರಿಸರ್ವ್ ಬ್ಯಾಂಕ್ ಕಡಿತ ಮಾಡಲು ಉದ್ದೇಶಿಸಿರುವ ರೆಪೊ, ರಿವರ್ಸ್ ರೆಪೊ ದರಗಳ ಕುರಿತಂತೆ ಚರ್ಚಿಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿವಿಧ ಕ್ಷೇತ್ರಗಳಿಗೆ ಸೂಕ್ತ ರೀತಿಯಲ್ಲಿ ಅನ್ವಯವಾಗುವಂತೆ ಎರಡನೇ ಉತ್ತೇಜನ ಪ್ಯಾಕೇಜ್ ಸಿದ್ದಪಡಿಸುತ್ತಿದ್ದು,ಮುಂಬರುವ ಕೆಲ ದಿನಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಆಹ್ಲುವಾಲಿಯಾ ಹೇಳಿದ್ದಾರೆ. |