ಹೊಸ ವರ್ಷದ ಪಾದಾರ್ಪಣೆಗೆ ಜನತೆ ಪರಸ್ಪರ ಶುಭ ಸಂದೇಶಗಳನ್ನು ಕಳುಹಿಸಲು ಆರ್ಥಿಕ ಬಿಕ್ಕಟ್ಟಿನಿಂದಾಗಿ ಇ-ಮೇಲ್ ಶುಭಾಷಯಗಳಿಗೆ ಮೊರೆಹೋಗುತ್ತಿರುವುದರಿಂದ ಗ್ರೀಟಿಂಗ್ಸ್ ಮಾರುಕಟ್ಟೆ ಕುಸಿತವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಪ್ರಸಕ್ತ ಋತುವಿನಲ್ಲಿ ಗ್ರೀಟಿಂಗ್ಸ್ ಕಾರ್ಡ್‌ಗಳ ಮಾರಾಟದಲ್ಲಿ ಶೇ.20 ರಿಂದ 25 ರಷ್ಟು ಕುಸಿತವಾಗಿದೆ ಎಂದು ನವದೆಹಲಿಯಲ್ಲಿರುವ ಮಾರುಕಟ್ಟೆಯ ಪ್ರತಿನಿಧಿಗಳು ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಕುಸಿತ ಮತ್ತು ಮುಂಬೈಯಲ್ಲಿ ನಡೆದ ಉಗ್ರರ ದಾಳಿಯಿಂದಾಗಿ ದೆಹಲಿಯ ನಾಗರಿಕರು ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಶುಭಾಷಯಗಳನ್ನು ಕಳುಹಿಸಲು ಇ-ಮೇಲ್‌ಗಳ ಮೊರೆಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಜನ್ಮದಿನಾಚರಣೆಗೆ ಹಾಗೂ ಫ್ರೆಂಡ್‌ಷಿಪ್ ದಿನಾಚರಣೆಯನ್ನು ಹೊರತುಪಡಿಸಿ ವಿಶೇಷ ದಿನಗಳಿಗಾಗಿ ಸಿದ್ದಪಡಿಸಿದ ಗ್ರೀಟಿಂಗ್ಸ್‌ಗಳ ಖರೀದಿಗೆ ಗ್ರಾಹಕರು ಲಭ್ಯವಾಗುತ್ತಿಲ್ಲ ಎಂದು ಕನ್ನಾಟ್ ಪ್ಲೇಸ್‌ನಲ್ಲಿರುವ ಜನಪ್ರಿಯ ಅಂಗಡಿಯೊಂದರ ಮಾಲೀಕರ ಅಭಿಪ್ರಾಯವಾಗಿದೆ.
ಪ್ರತಿ ವರ್ಷ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಗ್ರೀಟಿಂಗ್ಸ್ ಕಾರ್ಡ್‌ಗಳ ಖರೀದಿಗೆ ಜನಜಂಗುಳಿ ಸೇರುತ್ತಿದ್ದ ಜನತೆ, ಝಗಮಗಿಸುತ್ತಿರುವ ಪಂಚತಾರಾ ಹೋಟೆಲ್‌ಗಳು,ಗ್ರಾಹಕರನ್ನು ಆಕರ್ಷಿಸಲು ವಿವಿಧ ರೀತಿಯ ಜಾಹೀರಾತುಗಳಿಗೆ ಸಾಕ್ಷಿಯಾಗಿದ್ದ ದೆಹಲಿ ನಗರ, ಪ್ರಸಕ್ತ ವರ್ಷದಲ್ಲಿ ಕಳೆಗುಂದಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಜಾಗತಿಕ ಆರ್ಥಿಕ ಕುಸಿತದಿಂದಾಗಿ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿರುವುದರಿಂದ ಗ್ರೀಟಿಂಗ್ಸ್ ಮಾರುಕಟ್ಟೆಯಲ್ಲಿ ಶೇ.35 ರಷ್ಟು ಕುಸಿತವಾಗಿದ್ದು,ಕಾರ್ಪೋರೇಟ್ ಕಂಪೆನಿಗಳು ಸಗಟು ಖರೀದಿಗೆ ಸಲ್ಲಿಸುತ್ತಿರುವ ಬೇಡಿಕೆಗಳನ್ನು ಕಡಿತಗೊಳಿಸಿವೆ ಎಂದು ಹೆಲ್ಪೇಜ್ ಇಂಡಿಯಾದ ವ್ಯವಸ್ಥಾಪಕಿ ನಂದಿತಾ ಹೇಳಿದ್ದಾರೆ. |