ದೇಶದಾದ್ಯಂತ 11ಸಾವಿರ ಪಟ್ಟಣಗಳು, 340,000 ಗ್ರಾಮಗಳಲ್ಲಿ ಸಂಪರ್ಕ ಸೌಲಭ್ಯ ಕಲ್ಪಿಸಿರುವ ರಿಲಯನ್ಸ್‌ನ ಅನಿಲ ಧೀರುಭಾಯಿ ಅಂಬಾನಿ ಗ್ರೂಪ್, ಬಹು ನಿರೀಕ್ಷಿತ ಜಿಎಸ್‌ಎಂ ಮೊಬೈಲ್ ಟೆಲಿಫೋನ್ ಸೇವೆಯನ್ನು 10 ಸಾವಿರ ಕೋಟಿ ಹೂಡಿಕೆಯೊಂದಿಗೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಮುಂಬೈನಲ್ಲಿರುವ ರಿಲಯನ್ಸ್‌ನ ಕೇಂದ್ರ ಕಚೇರಿಯಲ್ಲಿ ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ, ಜಿಎಸ್‌ಎಂ ಮೊಬೈಲ್ ಟೆಲಿಫೋನ್ ಸೇವೆಯನ್ನು ಉದ್ಘಾಟಿಸಿ , ನಿಗದಿತ ಅವಧಿಗಿಂತ ಆರು ತಿಂಗಳು ಮುಂಚಿತವಾಗಿ ಜಿಎಸ್‌ಎಂ ಸೇವೆಯನ್ನು ಆರಂಭಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ದೇಶದ ಇತರ ಟೆಲಿಕಾಂ ಕಂಪೆನಿಗಳು ಗುರಿಯನ್ನು ಸಾಧಿಸಲು 15 ವರ್ಷಗಳ ಅವಧಿಯನ್ನು ತೆಗೆದುಕೊಂಡಿದ್ದು, ಆದರೆ ರಿಲಯನ್ಸ್ ಕಂಪೆನಿ ಕೇವಲ 15 ತಿಂಗಳಲ್ಲಿ ಗುರಿಯನ್ನು ಸಾಧಿಸಿದೆ. ಜಿಎಸ್‌ಎಂ ಸೇವೆ ಆರಂಭದೊಂದಿಗೆ ಗ್ರಾಹಕರಿಗೆ ಹೆಚ್ಚಿನ ಆಯ್ಕೆಯ ಅವಕಾಶಗಳನ್ನು ಒದಗಿಸಿಕೊಟ್ಟಿದೆ ಎಂದು ಅನಿಲ್ ಅಂಬಾನಿ ಹೇಳಿದ್ದಾರೆ.ಕಂಪೆನಿಯ ವೆಬ್‌ಸೈಟ್ ಮೂಲಗಳ ಪ್ರಕಾರ, ರಿಲಯನ್ಸ್ ಕಮ್ಯೂನಿಕೇಶನ್‌ನ ಸಿಡಿಎಂಎ ಸಂಪರ್ಕ ಜಾಲ ದೇಶದಾದ್ಯಂತ 20 ಸಾವಿರ ಪಟ್ಟಣಗಳು,450,ಸಾವಿರ ಗ್ರಾಮಗಳಿಗೆ ವಿಸ್ತರಿಸಿದ್ದು, ಸುಮಾರು 60 ಮಿಲಿಯನ್ ಗ್ರಾಹಕರಿದ್ದಾರೆ ಎಂದು ವರದಿ ಮಾಡಿದೆ. ರಿಲಯನ್ಸ್ ಸಂಸ್ಥಾಪಕ ದಿವಂಗತ ಧೀರುಭಾಯಿ ಅಂಬಾನಿಯವರ 76 ನೇ ಜನ್ಮದಿನಾಚರಣೆಯ ಎರಡು ದಿನಗಳ ನಂತರ ಜಿಎಸ್‌ಎಂ ಸೇವೆಯನ್ನು ಆರಂಭಿಸಲಾಗಿದೆ. 2002ರ ಡಿಸೆಂಬರ್ 28 ರಂದು ರಿಲಯನ್ಸ್ ಕಂಪೆನಿ, ಮೊಬೈಲ್ ಸೇವೆಯನ್ನು ಆರಂಭಿಸಿತ್ತು. |