ದೇಶದ ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಫೋರ್ಬ್ಸ್ ಮ್ಯಾಗ್‌ಜಿನ್‌ನಲ್ಲಿ ಮತ್ತೆ ಮಿಂಚಿದ್ದಾರೆ. ಆದರೆ ಜಾಗತಿಕ ಆರ್ಥಿಕ ಕುಸಿತದಿಂದಾಗಿ ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಹಣ ಕಳೆದುಕೊಂಡವರ ಸಾಲಿನಲ್ಲಿ ಮುಂಚೂಣಿಯಲ್ಲಿರುವುದಕ್ಕೆ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ 42 ಬಿಲಿಯನ್ ಡಾಲರ್‌ಗಳ ಸಂಪತ್ತಿನೊಂದಿಗೆ ಜಗತ್ತಿನ ಆರನೇ ಶ್ರೀಮಂತ ವ್ಯಕ್ತಿಯ ಸ್ಥಾನಪಡೆದಿದ್ದ ಉದ್ಯಮಿ ಅನಿಲ್ ಅಂಬಾನಿ, ಕಳೆದ ಡಿಸೆಂಬರ್ ವೇಳೆಗೆ 30 ಬಿಲಿಯನ್ ಡಾಲರ್ ಆಸ್ತಿಯನ್ನು ಕಳೆದುಕೊಂಡು 12ಬಿಲಿಯನ್ ಡಾಲರ್ ಸಂಪತ್ತಿಗೆ ಒಡೆಯರಾಗಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.2008 ರ ಆರ್ಥಿಕ ಸಾಲಿನಲ್ಲಿ, ಕೇವಲ ಒಂದು ವರ್ಷದ ಅವಧಿಯಲ್ಲಿ 24ಬಿಲಿಯನ್ ಡಾಲರ್ ಆಸ್ತಿಯನ್ನು ಸಂಪಾದಿಸಿ ಫೋರ್ಬ್ಸ್‌ನಲ್ಲಿ ಸ್ಥಾನಪಡೆದಿದ್ದ ಅಂಬಾನಿ, ಜಾಗತಿಕ ಆರ್ಥಿಕ ಕುಸಿತದಿಂದಾಗಿ ಒಂದು ವರ್ಷದ ಅವಧಿಯಲ್ಲಿ 30 ಬಿಲಿಯನ್ ಡಾಲರ್ ಸಂಪತ್ತನ್ನು ಕಳೆದುಕೊಂಡಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಜಗತ್ತಿನ 10 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನಪಡೆದಿದ್ದ ಅನಿಲ್ ಸಹೋದರ ಮುಕೇಶ್ ಅಂಬಾನಿ, ಉಕ್ಕು ಸಾಮ್ರಾಜ್ಯದ ಅಧಿಪತಿ ಲಕ್ಷ್ಮಿ ಮಿತ್ತಲ್ ಮತ್ತು ಭಾರತೀಯ ಮೂಲದ ಉದ್ಯಮಿ ಕೆ.ಪಿ.ಸಿಂಗ್ ಜಾಗತಿಕ ಆರ್ಥಿಕ ಕುಸಿತದಿಂದಾಗಿ 20 ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿನ ಹಣವನ್ನು ಕಳೆದುಕೊಂಡಿದ್ದಾರೆ ಎಂದು ಫೋರ್ಬ್ಸ್ ತಿಳಿಸಿದೆ. 2007-08 ರ ಆರ್ಥಿಕ ಸಾಲಿನಲ್ಲಿ ಜಗತ್ತಿನ 1,125 ಬಿಲಿಯನೇರ್‌ಗಳಲ್ಲಿ 300 ಬಿಲಿಯನೇರ್‌ಗಳು ಕನಿಷ್ಟ 1ಬಿಲಿಯನ್ ಡಾಲರ್ ಸಂಪತ್ತನ್ನು ಕಳೆದುಕೊಂಡಿದ್ದು, ಶ್ರೀಮಂತ ಉದ್ಯಮಿಗಳಿಗೆ ಭೀಕರ ವರ್ಷವಾಗಿ ಪರಿಣಮಿಸಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ. |