ದೇಶದಲ್ಲಿ ನಗದು ಹಣ ಚಲಾವಣೆ ಪರಿಸ್ಥಿತಿ ತಿಳಿಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ, ರಿವರ್ಸ್ ರೆಪೊ ದರಗಳನ್ನು ಕಡಿತಗೊಳಿಸಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.ಸೆಂಟ್ರಲ್ ಬ್ಯಾಂಕ್ ರೆಪೊ ಮತ್ತು ರಿವರ್ಸ್ ರೆಪೊ ದರಗಳಲ್ಲಿ ಶೇ.1 ರಷ್ಟು ಕಡಿತಗೊಳಿಸಿದೆ ಎಂದು ರಿಸರ್ವ್ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. 100 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿ ಪ್ರಸ್ತುತವಿದ್ದ ಶೇ 6.5ರಷ್ಟು ರೆಪೊ ದರವನ್ನು ಶೇ.5.5ಕ್ಕೆ ಇಳಿಕೆ ಮಾಡಿದೆ. ಪ್ರಸ್ತುತವಿರುವ ಶೇ.5ರಷ್ಟು ರಿವರ್ಸ್ ರೆಪೊ ದರವನ್ನು ಶೇ.4ಕ್ಕೆ ಇಳಿಕೆ ಮಾಡಿದೆ.ಕ್ಯಾಶ್ ರಿಸರವ್ ರೆಶಿಯೋ ದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿ ಶೇ.5.5ರಿಂದ ಶೇ.5 ಕ್ಕೆ ಇಳಿಕೆ ಮಾಡಿದ್ದು, ಜನೆವರಿ 17 ರಿಂದ ಅನ್ವಯವಾಗಲಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ. ಸಿಆರ್‌ಆರ್ ಶೇ.0.5 ರಷ್ಟು ಕಡಿತಗೊಳಿಸುವುದರಿಂದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ 20 ಸಾವಿರ ಕೋಟಿ ರೂಪಾಯಿಗಳ ಹೆಚ್ಚುವರಿ ನಗದು ಹಣ ಚಲಾವಣೆಗೆ ಅವಕಾಶ ನೀಡಿದಂತಾಗುತ್ತದೆ ಎಂದು ಆರ್‌ಬಿಐ ಪ್ರಕಟಿಸಿದೆ. ಕ್ಯಾಶ್ ರಿಸರ್ವ್ ರೆಶಿಯೋ ಕಡಿತಗೊಳಿಸಿರುವುದರಿಂದ ಬ್ಯಾಂಕ್‌ಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಗಳನ್ನು ನೀಡಲು ಅನುಕೂಲವಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿಕೆ ನೀಡಿದೆ.ಸೆಪ್ಟೆಂಬರ್ 2008ರ ಅವಧಿಯಲ್ಲಿದ್ದ ಶೇ.9.0 ರೆಪೊ ದರವನ್ನು ಶೇ.6.5ಕ್ಕೆ ಇಳಿಕೆ ಮಾಡಲಾಗಿದ್ದು,ರಿವರ್ಸ್ ರೆಪೊ ದರವನ್ನು ಶೇ.6.0 ದಿಂದ ಶೇ.5.0ಕ್ಕೆ ಕಡಿತ ಮಾಡಲಾಗಿತ್ತು. ಕ್ಯಾಶ್ ರಿಸರ್ವ್ ರೆಶಿಯೋ ದರವನ್ನು ಶೇ.9.0 ದಿಂದ ಶೇ.5.5ಕ್ಕೆ ಇಳಿಕೆಯನ್ನು ರಿಸರ್ವ್ ಬ್ಯಾಂಕ್ ಘೋಷಿಸಿದೆ. ರಿಸರ್ವ್ ಬ್ಯಾಂಕ್ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಸರಣಿಯಾಗಿ ಕಡಿತಗೊಳಿಸಿದ್ದರಿಂದ ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳು ಪಿಎಲ್‌ಆರ್ ಕಡಿತವನ್ನು ಘೋಷಿಸಲು ಸಾಧ್ಯವಾಗಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ. |