ಪ್ರಸಕ್ತ ಆರ್ಥಿಕ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಹುದ್ದೆಗಳ ಕಡಿತವಾಗಬಹುದು. ಆದರೆ ದೇಶದ ಆರ್ಥಿಕಾಭಿವೃದ್ಧಿ ದರ ಶೇ.7 ರಷ್ಟಾಗಲಿರುವುದರಿಂದ ಹುದ್ದೆಗಳ ಕಡಿತ ತಾತ್ಕಾಲಿಕವಾಗಿರುತ್ತದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ. ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕೆಲ ಕ್ಷೇತ್ರಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಆರ್ಥಿಕ ಕುಸಿತವನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಹುದ್ದೆಗಳಲ್ಲಿ ಕಡಿತವಾಗುವ ಸಾಧ್ಯತೆಗಳಿವೆ. ಆದರೆ ಅದು ತಾತ್ಕಾಲಿಕವಾಗಿತ್ತದೆ ಎಂದು ಉತ್ತೇಜನ ಪ್ಯಾಕೇಜ್ ಕುರಿತಂತೆ ವಿವರಣೆ ನೀಡುತ್ತಿರುವ ಸಂದರ್ಭದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ದೇಶದ ಆರ್ಥಿಕ ಕುಸಿತವನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಯಲು ಪ್ಯಾಕೇಜ್‌ಗಳನ್ನು ಕೇಂದ್ರ ಸರಕಾರ ಘೋಷಣೆ ಮಾಡಿದೆ. ಪ್ರಸಕ್ತ ವರ್ಷದಲ್ಲಿ ಆರ್ಥಿಕಾಭಿವೃದ್ಧಿ ದರ ಶೇ.7 ರಷ್ಟಾಗುವ ನಿರೀಕ್ಷೆಯಿದೆ ಎಂದು ಮೊಂಟೆಕ್ ಹೇಳಿದ್ದಾರೆ. ಕೇಂದ್ರ ಸರಕಾರದ ಎರಡನೇ ಉತ್ತೇಜನ ಪ್ಯಾಕೇಜ್ ಘೋಷಣೆಯಿಂದಾಗಿ ದೇಶದ ಆರ್ಥಿಕಾಭಿವೃದ್ಧಿ ದರ ಶೇ.7 ರ ಗಡಿಯನ್ನು ತಲುಪಲಿದ್ದು, ಹುದ್ದೆಗಳ ಅವಕಾಶದಲ್ಲಿ ಹೆಚ್ಚಳವಾಗಲಿದೆ ಎಂದು ನುಡಿದರು.ಜಾಗತಿಕ ಆರ್ಥಿಕ ಕುಸಿತದಿಂದಾಗಿ ದೇಶದ ಆರ್ಥಿಕತೆಯ ಮೇಲಾದ ಪರಿಣಾಮವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಆದರೆ ಪ್ಯಾಕೇಜ್‌ಗಳ ಘೋಷಣೆಯಿಂದಾಗಿ ಅಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಬಹುದಾಗಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ. |