ಜಾಗತಿಕ ಆರ್ಥಿಕ ಕುಸಿತದಿಂದ ದೇಶದ ಆರ್ಥಿಕತೆಯ ಮೇಲೆ ಬೀರುತ್ತಿರುವ ಪರಿಣಾಮ ಕುರಿತಂತೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮನಮೋಹನ್ ಸಿಂಗ್ ಮುಂಬರುವ ವರ್ಷದಲ್ಲಿ ಆರ್ಥಿಕ ಸ್ಥಿತಿ ಕಠಿಣವಾಗಲಿದೆ ಎಂದು ಹೇಳಿದ್ದಾರೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹೊಸ ಸವಾಲುಗಳನ್ನು ಎದುರಿಸುವಂತಾಗಿದ್ದು, ಮುಂದಿನ ವರ್ಷದ ಆರ್ಥಿಕ ಸ್ಥಿತಿ ಮತ್ತಷ್ಟು ಕಠಿಣವಾಗಲಿದೆ ಎಂದು ಎರಡನೇ ಪ್ಯಾಕೇಜ್ ಘೋಷಣೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಜಾಗತಿಕ ಆರ್ಥಿಕ ಕುಸಿತದ ಮಧ್ಯೆಯು ದೇಶದ ಆರ್ಥಿಕಾಭಿವೃದ್ಧಿಯ ದರ ಶೇ.7 ರಷ್ಟಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಶಿಲ್ಲಾಂಗ್‌ನಲ್ಲಿ 96ನೇಯ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಪ್ರದಾನಿ ಮನಮೋಹನ್ ಸಿಂಗ್, ಜಾಗತಿಕ ಆರ್ಥಿಕ ಕುಸಿತ, ದೇಶದ ಎದುರಿಗೆ ಸವಾಲಾಗಿ ಪರಿಣಮಿಸಿದ್ದು, ಈಡೀ ಜಗತ್ತು ಆರ್ಥಿಕ ಕುಸಿತದಿಂದ ಬಳಲುತ್ತಿದೆ ಎಂದು ಹೇಳಿದ್ದಾರೆ. ಆರ್ಥಿಕತೆಯ ಕುಸಿತದಿಂದಾಗಿ ದೇಶದ ರಫ್ತು ವಹಿವಾಟು ಕುಸಿತಗೊಂಡಿದ್ದು, ಆರ್ಥಿಕ ಬಿಕ್ಕಟ್ಟನ್ನು ಆದಷ್ಟು ಮಟ್ಟಿಗೆ ಪರಿಹರಿಸಲು ಮತ್ತಷ್ಟು ಪ್ಯಾಕೇಜ್‌ಗಳ ಅಗತ್ಯವಿದೆ ಎಂದು ಪ್ರಧಾನಿ ಹೇಳಿದ್ದಾರೆ. |