ಮೊಬೈಲ್ ಕಂಪೆನಿಗಳಲ್ಲಿ ದರ ಸಮರ ನಡೆಯುತ್ತಿರುವಂತೆ, ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯೂನಿಕೇಶನ್ ರವಿವಾರದಂದು ಮುಂಬೈನಲ್ಲಿ ಜಿಎಸ್‌ಎಂ ಸೇವೆಯನ್ನು ಆರಂಭಿಸಿದ್ದು , ಮೂರು ತಿಂಗಳ ಅವಧಿಯ 900 ರೂಪಾಯಿಗಳ ಉಚಿತ ಟಾಕ್‌ಟೈಮ್ ಪ್ರಕಟಿಸಿದೆ. ನೂತನ ಗ್ರಾಹಕರು 90 ದಿನಗಳ ಅವಧಿಯಲ್ಲಿ ಪ್ರತಿ ದಿನ 10 ರೂಪಾಯಿ ಉಚಿತ ಟಾಕ್‌ಟೈಮ್ ಪಡೆಯಲಿದ್ದು, ಪ್ರತಿ ನಿಮಿಷದ ಸ್ಥಳೀಯ ಕರೆಗಳಿಗೆ 1 ರೂಪಾಯಿ, ಎಸ್‌ಟಿಡಿ ಕರೆಗಳಿಗೆ 1.50 ರೂಪಾಯಿ ನಿಗದಿಪಡಿಸಲಾಗಿದೆ ಎಂದು ಪಶ್ಚಿಮ ಪ್ರಾಂತ್ಯದ ಮುಖ್ಯಸ್ಥ ದಿನೇಶ್ ಗುಲಾಟಿ ತಿಳಿಸಿದ್ದಾರೆ. ಪ್ರತಿ ದಿನ ಗ್ರಾಹಕರು 10 ರೂಪಾಯಿ ಉಚಿತ ಟಾಕ್‌ಟೈಮ್ ಪೂರ್ತಿಗೊಳಿಸಿದ ನಂತರ 10 ರೂಪಾಯಿಗಳಿಂದ 500 ರೂಪಾಯಿಗಳವರೆಗೆ ಟಾಪ್‌ಅಪ್ ಕಾರ್ಡ್‌ಗಳನ್ನು ಉಪಯೋಗಿಸಬಹುದು ಎಂದು ಗುಲಾಟಿ ಹೇಳಿದ್ದಾರೆ.ರಿಲಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿ ಸುದ್ದಿಗಾರರೊಂದಿಗೆ ಮಾತನಾಡಿ, 2003ರಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ಸ್, ಟೆಲಿಕಾಂ ಕ್ಷೇತ್ರದ ದಿಕ್ಕನ್ನು ಬದಲಿಸಿತು. ದೇಶದಾದ್ಯಂತ ಜಿಎಸ್‌ಎಂ ಸೇವೆಯನ್ನು ಆರಂಭಿಸಲಾಗಿದ್ದು, ಉತ್ತಮ ಸಿಡಿಎಂಎ ನೆಟ್‌ವರ್ಕ್ ಸೌಲಭ್ಯಗಳಿಂದಾಗಿ ದೇಶದ ಮೂಲೆಮೂಲೆಗಳಿಗೆ ಸಂಪರ್ಕ, ಗುಣಮಟ್ಟದ ಸೇವೆಗಳಿಂದಾಗಿ ಗ್ರಾಹಕರ ಹಣಕ್ಕೆ ತಕ್ಕಂತೆ ಸೇವಾಸೌಲಭ್ಯವನ್ನು ರಿಲಯನ್ಸ್ ಹೊಂದಿದೆ ಎಂದು ತಿಳಿಸಿದರು. ಉಚಿತ ಟಾಕ್‌ಟೈಮ್ ಅವಧಿ ಮುಕ್ತಾಯದ ನಂತರ ರಿಲಯನ್ಸ್ ಜಿಎಸ್‌ಎಂ ಗ್ರಾಹಕರು (ಜಿಎಸ್‌ಎಂ ಮತ್ತು ಸಿಡಿಎಂಎ) ಮುಂಬೈ,ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರಿಗೆ ಅನಿಯಮಿತ ಉಚಿತ ಕರೆಗಳನ್ನು ಮಾಡಬಹುದು ಎಂದು ರಿಲಯನ್ಸ್ ಮೂಲಗಳು ತಿಳಿಸಿವೆ. |