ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಆರ್ಥಿಕ ಕುಸಿತವನ್ನು ತಡೆಯಲು ಅಭಿವೃದ್ಧಿ ದರ, ಆರ್ಥಿಕ ನಿಯಮಗಳಲ್ಲಿ ತಂದ ಬದಲಾವಣೆಗಳಿಂದಾಗಿ ಜಿ-20 ರಾಷ್ಟ್ರಗಳಲ್ಲಿ ಚೀನಾ, ರಷ್ಯಾ ಮತ್ತು ದಕ್ಷಿಣ ಕೊರಿಯಾದ ನಂತರ ಭಾರತ ಜಗತ್ತಿನ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಅಧ್ಯಯನದ ವರದಿಯೊಂದು ಪ್ರಕಟಿಸಿದೆ. ಆರ್ಥಿಕವಾಗಿ ಅಭಿವೃದ್ಧಿಹೊಂದಿದ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್ ಮತ್ತು ಜಪಾನ್ ರಾಷ್ಟ್ರಗಳು ಕ್ರಮವಾಗಿ 11,12,13 ಸ್ಥಾನಗಳನ್ನು ಪಡೆಯಲಿವೆ ಎಂದು ಭಾರತ ಮತ್ತು ಜಿ-20 ಜಾಗತಿಕ ಕುಸಿತದ ನಡುವೆ ಆರ್ಥಿಕ ಮೂಲಗಳು ಕುರಿತಂತೆ ಅಧ್ಯಯನ ನಡೆಸಿದ ಕೈಗಾರಿಕೋದ್ಯಮದ ಸಂಘಟನೆಯಾದ ಅಸೋಚಾಮ್ ವರದಿ ಮಾಡಿದೆ. ದೇಶದ ಆರ್ಥಿಕತೆಯನ್ನು ಸೂಚಿಸುವ ಏಳು ಮಹತ್ವದ ಅಂಶಗಳಾದ ಆರ್ಥಿಕ ವೆಚ್ಚಾಶಕ್ತಿ, ತೆರಿಗೆ ನಿಯಮಗಳು, ಬಡ್ಡಿ ದರ ನೀತಿಗಳು, ಬಜೆಟ್ ಉಳಿತಾಯ, ಆರ್ಥಿಕ ಹೊರೆ ಮತ್ತು ವಿದೇಶಿ ವಿನಿಮಯ ಸಂಗ್ರಹಣೆಗಳ ಕುರಿತಂತೆ ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗಿದೆ ಎಂದು ಅಸೋಚಾಮ್ ಮೂಲಗಳು ತಿಳಿಸಿವೆ. ಅಭಿವೃದ್ಧಿ ದರ , ಉತ್ತಮ ಆರ್ಥಿಕ ನೀತಿಗಳು ,ವಿದೇಶಿ ವಿನಿಮಯ ಸಂಗ್ರಹಣೆಗಳಿಂದ ಭಧ್ರ ಆರ್ಥಿಕತೆಯನ್ನು ಹೊಂದಿರುವುದರಿಂದ ಭಾರತ, ಚೀನಾ,ರಷ್ಯಾ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳು ಆರ್ಥಿಕ ಬಿಕ್ಕಟ್ಟಿನಿಂದ ಹೊರಬಂದು ಬಲಾಢ್ಯ ಆರ್ಥಿಕಶಕ್ತಿಶಾಲಿ ರಾಷ್ಟ್ರಗಳಾಗಲಿವೆ ಎಂದು ಚೇಂಬರ್ ತಿಳಿಸಿದೆ. |