ರಾಷ್ಟ್ರ ಆರ್ಥಿಕ ಕುಸಿತದ ಮಧ್ಯೆ ಸಿಲುಕಿ ಕಷ್ಟದ ಸ್ಥಿತಿಯಲ್ಲಿದ್ದು, ಆರ್ಥಿಕ ಸ್ಥಿತಿ ಹದಗೆಡುತ್ತಾ ಸಾಗಿದೆ ಎಂದು ಅಮೆರಿಕದ ಚುನಾಯಿತ ಅಧ್ಯಕ್ಷ ಬರಾಕ್ ಒಬಾಮ್ ಹೇಳಿದ್ದಾರೆ.ಆರ್ಥಿಕ ಸಲಹೆಗಾರರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಒಬಾಮಾ, ನಾವು ಕಠಿಣವಾದ ಆರ್ಥಿಕ ಸ್ಥಿತಿಯನ್ನು ಎದುರಿಸುತ್ತಿದ್ದು, ದೇಶದ ಆರ್ಥಿಕ ಸ್ಥಿತಿ ತುಂಬಾ ಹೀನಾಯವಾಗಿದೆ ಎಂದು ಹೇಳಿದಲ್ಲಿ ಬಹುತೇಕ ಅಮೆರಿಕನ್ನರಿಗೆ ಆಶ್ಚರ್ಯವಾಗುವುದಿಲ್ಲ ಎಂದು ನುಡಿದರು. ಆರ್ಥಿಕ ಕುಸಿತದ ಬಿಕ್ಕಟ್ಟನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕೂಡಲೇ ಕಾರ್ಯಪ್ರವೃತ್ತರಾಗುವ ಅವಶ್ಯಕತೆಯಿದ್ದು, ಇಲ್ಲವಾದಲ್ಲಿ ಮುಂದಿನ ಕೆಲ ವರ್ಷಗಳಲ್ಲಿ ಭಾರಿ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಒಬಾಮಾ ತಿಳಿಸಿದ್ದಾರೆ. ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೊಸಿ ಮತ್ತು ಸೆನೆಟರ್ ನಾಯಕ ಹಾರಿ ರೇಡ್ ಭಾಗವಹಿಸಿದ್ದ ಜನಪ್ರತಿನಿಧಿಗಳ ಸಭೆಯಲ್ಲಿ ಆರ್ಥಿಕ ಕುಸಿತವನ್ನು ತಡೆಯಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತಂತೆ ಚರ್ಚಿಸಲಾಯಿತು ಎಂದು ಒಬಾಮಾ ಹೇಳಿದ್ದಾರೆ. |