ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಚಿಕಿತ್ಸೆ ದೊರಯುವ ಹಿನ್ನೆಲೆಯಲ್ಲಿ ಭಾರತದ ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರ ವಾರ್ಷಿಕವಾಗಿ ಶೇ.30ರ ಅಭಿವೃದ್ಧಿಯತ್ತ ಸಾಗುತ್ತಿದ್ದು, ಮುಂಬರುವ 2015ರ ವೇಳೆಗೆ 9500 ಕೋಟಿ ರೂಪಾಯಿಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ಕೈಗಾರಿಕೋದ್ಯಮ ಸಂಘ ಅಸೋಚಾಮ್ ಪ್ರಕಟಿಸಿದೆ. ಅಮೆರಿಕ ಯುರೋಪ್ ದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಶಸ್ತ್ರಚಿಕಿತ್ಸೆ ವೆಚ್ಚ ಶೇ.10 ಅಥವಾ ಅದಕ್ಕಿಂತ ಕಡೆಮೆಯಿರುವುದರಿಂದ ವಿದೇಶಿ ಪ್ರವಾಸಿಗಳು ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸುತ್ತಾರೆ ಎಂದು ಚೇಂಬರ್ ವಿವರಣೆ ನೀಡಿದೆ.
ಸ್ಪರ್ಧಾತ್ಮಕ ಅಂಶಗಳು ಹಾಗೂ ಅಧಿಕ ವೆಚ್ಚಗಳನ್ನು ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿದೇಶದಲ್ಲಿರುವ ರೋಗಿಗಳು ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೌಲಭ್ಯ ದೊರೆಯುವುದರಿಂದ ಭಾರತಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ಅಸೋಚಾಮ್ ಹೇಳಿದೆ.
ಕಳೆದ 2008ರಲ್ಲಿ ಭಾರತದ ವೈದ್ಯಕೀಯ ಪ್ರವಾಸೋದ್ಯಮ 1,500 ಕೋಟಿ ರೂ.ಗಳಿಗೆ ತಲುಪಿದ್ದು,ವಾರ್ಷಿಕವಾಗಿ ಶೇ.30ರಷ್ಟು ಏರಿಕೆ ಕಾಣುತ್ತಿರುವುದರಿಂದ ಮುಂಬರುವ 2015ರ ವೇಳೆಗೆ 9,500ಕೋಟಿ ರೂಪಾಯಿಗಳಿಗೆ ತಲುಪುವ ನಿರೀಕ್ಷೆಯಿದೆ ಎಂದು ಚೇಂಬರ್ ವಿಶ್ವಾಸ ವ್ಯಕ್ತಪಡಿಸಿದೆ.
ಪ್ರಸಕ್ತ ಆರ್ಥಿಕ ವರ್ಷದ ಆರಂಭದ ಎಂಟು ತಿಂಗಳುಗಳಲ್ಲಿ ಸುಮಾರು 1.8 ಲಕ್ಷ ವಿದೇಶಿ ಪ್ರವಾಸಿಗರು ಚಿಕಿತ್ಸೆಗಾಗಿ ಆಗಮಿಸಿದ್ದು, ಮುಂಬರುವ ಕೆಲ ವರ್ಷಗಳಲ್ಲಿ ಶೇ22 ರಿಂದ ಶೇ.25 ರಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಚೇಂಬರ್ ತಿಳಿಸಿದೆ.
ಹೃದಯ ಕವಾಟು ಬದಲಾವಣೆ ಚಿಕಿತ್ಸೆಗಾಗಿ ಅಮೆರಿಕದಲ್ಲಿ 0.2 ಮಿಲಿಯನ್ ಡಾಲರ್ ವೆಚ್ಚ ತಗಲುತಿದ್ದು, ಅದೇ ಚಿಕಿತ್ಸೆಗಾಗಿ ಭಾರತದಲ್ಲಿ ಆಗಮನ ನಿರ್ಗಮನ ವಿಮಾನ ಪ್ರವಾಸ ಸೇರಿದಂತೆ ಕೇವಲ 10 ಸಾವಿರ ಡಾಲರ್‌ಗಳ ವೆಚ್ಚದಲ್ಲಿ ಚಿಕಿತ್ಸೆ ಲಭ್ಯವಾಗುತ್ತದೆ ಎಂದು ಕೈಗಾರಿಕೋದ್ಯಮ ಸಂಘ ಅಸೋಚಾಮ್ ಪ್ರಕಟಿಸಿದೆ. |